Skip to main content

ದೇವರೆಂದರೆ ನಂಬಿಕೆ... ನಂಬಿಕೆಯೇ ದೇವರು.

ಮಲೆನಾಡಿನಲ್ಲಿ ಇತ್ತೀಚಿನ ತನಕವೂ ನಂಬಿಕೆಯೊಂದಿತ್ತು
 (ಈಗಲೂ ಇರಬಹುದು). ಕಾಕತಾಳೀಯವೋ, ಪ್ರಕೃತಿಯ  ನಿಗೂಢತೆಯೋ ಅಂಗಳದಲ್ಲಿ  ಆಡುತ್ತಿರುತ್ತಿದ್ದ ಪುಟ್ಟ ಕರುಗಳು ಕೆಲಹೊತ್ತು ಕಾಣೆಯಾಗುತ್ತಿದ್ದವು. ಸುತ್ತ-ಮುತ್ತಲಿನೆಲ್ಲಿ ಹುಡುಕಿದರೂ ಕರುವಿನ ಸುಳಿವು ಸಿಗುತ್ತಿರಲಿಲ್ಲ. ಆ ಕ್ಷಣಕ್ಕೆ ಅಮ್ಮನೋ, ಅಜ್ಜಿಯೋ ' ಕರಿಗೆ ಏನೂ ಆಗ್ದಂಗೆ ವಾಪಸ್ ಬಂದ್ರೆ ನಿಂಗೊಂದ್ ಹಣ್ಕಾಯಿ ಕೊಡ್ತಿನಿ, ಕೋಳಿ ಕೊಡ್ತಿನಿ' ಎಂದು ದೈವಕ್ಕೆ ಕಾಣಿಕೆ ಕಟ್ಟುತ್ತಿದ್ದರು. ಕಾಣಿಕೆ ಕಟ್ಟಿದ ಕೆಲಹೊತ್ತಿನಲ್ಲೇ ಕರು ಅದೆಲ್ಲಿಂದಲೋ ಚೆಂಗನೆ ನೆಗೆದು ಬರುತ್ತಿತ್ತು.!
'ಕರನ ದಯ್ಯ ಅಡಗ್ಸಿಡ್ತದೆ' ಎಂಬುದು ಮಲೆನಾಡಿನಲ್ಲಿ ಬಹು ಪ್ರಚಲಿತದ ಮಾತು. ನಾನಿಲ್ಲಿ ಕರುವನ್ನು ದೈವವೇ ಹುಡುಕಿಕೊಟ್ಟಿತು ಅಂತಲೋ ಅಥವಾ ಇವೆಲ್ಲಾ ಜನರ ಮೂಢ ನಂಬಿಕೆಯಷ್ಟೇ ಅಂತಲೋ ತರ್ಕಿಸುತ್ತಿಲ್ಲ ಅಥವಾ ಷರಾ ಬರೆಯುತ್ತಿಲ್ಲ. ಜನಪದವನ್ನು, ಜನರ ನಂಬಿಕೆಗಳನ್ನು ನಾನು ಎಲ್ಲದಕ್ಕಿಂತಾ ಹೆಚ್ಚು ಪ್ರೀತಿಸುತ್ತೇನೆ, ಗೌರವಿಸುತ್ತೇನೆ.

 ಚೌಡಿ, ದಯ್ಯ, ಜಟ್ಟಿಗ, ಹೊಟ್ಟು ದಯ್ಯ ಇವೆಲ್ಲಾ ಮಲೆನಾಡಿನಲ್ಲಿ ಸದಾ ಕಾಲ ತೋಟ, ಗದ್ದೆ ಕಾಯುವ, ಜಾನುವಾರುಗಳನ್ನು ರಕ್ಷಿಸುವ ದೈವಗಳು. ಅವುಗಳಿಗೆ ವರ್ಷಕ್ಕೊಮ್ಮೆ  ಎರಡು, ನಾಲ್ಕು ಕಾಲಿನ ಆಹಾರ ನೀಡಲೇಬೇಕು. ಅದರಲ್ಲೂ ಬಹುತೇಕ ದೈವಗಳಿಗೆ ಹಂದಿಯೇ ಪ್ರಿಯವಾದ ಆಹಾರ. ' ಇವತ್ತು ಚೌಡಿಗೆ ಇಕ್ತಾರಂತೆ...' ಎಂಬ ಸುದ್ದಿ ಕಿವಿಗೆ ಬಿದ್ದರೆ ಆ ಊರಿನ, ಪರವೂರಿನ ಜನ ತಮ್ಮೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ಊಟದ ಹೊತ್ತಿಗೆ ಸರಿಯಾಗಿ ದೈವದ ಬನದೊಳಗೆ ಜಮಾಯಿಸಿಬಿಡುತ್ತಾರೆ.
ತುಂಡಿನ( ಮಾಂಸಾಹಾರ) ಘಮಲಿನ ಆಕರ್ಷಣೆಯೇ ಅಂಥಾದ್ದು.!
ಒಂದೇ ಬನದಲ್ಲಿ ಮೂರ್ನಾಲ್ಕು ದೈವಗಳ ಪ್ರತಿಷ್ಟಾಪನೆಯಾಗಿರುತ್ತದೆ. ಒಂದೊಂದಕ್ಕೂ ಒಂದೊಂದು ಹೆಸರು. ಪ್ರತಿಯೊಂದು ದೈವಗಳಿಗೂ ಪ್ರತ್ಯೇಕವಾದ ಹಬ್ಬ, ಪ್ರತ್ಯೇಕವಾದ ಎಡೆ( ನೈವೇದ್ಯ) ರೈತರ ಫಸಲು ಕುಯಿಲು ಮುಗಿದ ನಂತರ ದೈವಗಳಿಗೆ ಸುಗ್ಗಿಯೋ ಸುಗ್ಗಿ.! ಬೇಸಿಗೆಯ ಎರಡು ತಿಂಗಳಿನಲ್ಲಿ ಹದಿನೈದಿಪ್ಪತ್ತು ದಿನಗಳ ಅಂತರದಲ್ಲಿ ಒಂದೊಂದು ದೈವಕ್ಕೆ ಊಟ.
ಪ್ರತಿ ವರ್ಷವೂ ಎಡೆಯಿಕ್ಕದಿದ್ದರೆ ದೈವಗಳು ತೋಟ ಕಾಯುವುದಿಲ್ಲ ಎಂಬ ನಂಬಿಕೆ. ಇನ್ನು ಕೆಲವು ದೈವಗಳು ನಿಗದಿತ ಸಮಯದಲ್ಲಿ ಊಟ ನೀಡದಿದ್ದಲ್ಲಿ ರಾತ್ರಿ ಹೊತ್ತು ಅಬ್ಬರಿಸುತ್ತಾ ತಿರುಗುತ್ತವೆ, ಮನೆಯ ಸುತ್ತಾ ಗೆಜ್ಜೆ ಸದ್ದು ಮಾಡುತ್ತಾ ಓಡಾಡುತ್ತವೆ ಎಂಬ ನಂಬಿಕೆ.
ಮೇಲಿನ ಯಾವುವೂ ಮೂಢ ನಂಬಿಕೆಗಳಲ್ಲ. ನಂಬಿಕೆಯಷ್ಟೇ... ಮತ್ತೊಬ್ಬರಿಗೆ ಅಥವಾ ತನಗೇ ತೊಂದರೆಯಾಗದಂತೆ , ನಷ್ಟವಾಗದಂತೆ ಆಚರಿಸುವ ಯಾವ ಆಚರಣೆಯೂ ಮೂಢ ನಂಬಿಕೆಯಲ್ಲ.  ಮೇಲಾಗಿ ದೈವ ಎಂದರೆ ಪ್ರಕೃತಿಯ ಒಂದು ಭಾಗ. ದೈವಕ್ಕೆ ಆಕಾರವಿಲ್ಲ, ಮೂರ್ತಿ ರೂಪವಿಲ್ಲ. ಕಲ್ಲುಗಳನ್ನು ಮರದಡಿಯಲ್ಲಿಟ್ಟು ಊರಿಗೆ ಒಳ್ಳೆಯದಾಗಲಿ , ಕಾಲಕಾಲಕ್ಕೆ ಮಳೆ, ಬೆಳೆ ಚೆನ್ನಾಗಿ ಬರಲಿ ಎಂದು ಪೂಜಿಸುವ ರೀತಿಯೇ ಅನನ್ಯವಾದ್ದು. ಅದೇ ನಿಜವಾದ ಪ್ರಕೃತಿಯ ಆರಾಧನೆ.
ದೇವರೆಂದರೆ ನಂಬಿಕೆ, ನಂಬಿಕೆಯೇ ದೇವರು...
ಅದೂ ಕೂಡಾ ಪ್ರಕೃತಿಯನ್ನೇ ದೇವರೆಂದು ಪೂಜಿಸುವುದು ಜನಪದದ ಉತ್ಕೃಷ್ಟ ಮನಃಸ್ಥಿತಿಗೆ ಸಾಕ್ಷಿ. 

Comments

Post a Comment

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...