Skip to main content

Nature Engineering

ಈ ಮಳೆಗಾಲದಲ್ಲಿ ನಮ್ಮೂರಿನ ಗುಡ್ಡ ಕುಸಿದ ಜಾಗಗಳಲ್ಲಿ ಓಡಾಡುವಾಗ ಒಂದು ಕಡೆ ದೊಡ್ಡ ವಿಸ್ಮಯ ಎನಿಸುವಂಥದ್ದು ಕಂಡಿತು. ಕಾಫಿ ತೋಟದ ಪುಟ್ಟ ಕಣಿವೆಯೊಂದು ಗುಡ್ಡದ ಮಣ್ಣು , ನೀರು ಕೊಚ್ಚಿ ಬಂದ ಪರಿಣಾಮ ಐವತ್ತರವತ್ತು ಅಡಿ ಅಗಲದಷ್ಟು ದೊಡ್ಡ ಹೊಳೆಯಾಗಿ ಮಾರ್ಪಟ್ಟಿತ್ತು.!
ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering!
ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ.
ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು.
ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರಣೆಯನ್ನು ಪ್ರಕೃತಿ ಮರು ವರ್ಷವೇ ನಡೆಸಬಹುದು ಅಥವಾ ಮುಂದಿನ ಶತಮಾನಕ್ಕೂ ನಡೆಸಬಹುದು ಲೆಕ್ಕಾಚಾರ ಅದಕ್ಕೆ ಬಿಟ್ಟಿದ್ದು.
ಹಾಗೆಯೇ ಈ ಸಾಂಕ್ರಾಮಿಕ ರೋಗಗಳು.
ಸಾಂಕ್ರಾಮಿಕ ರೋಗವು ಸಾಮೂಹಿಕ ಮಾರಣ ಹೋಮ ನಡೆಸುತ್ತಿರುವುದು ಇದೇ ಮೊದಲೇನಲ್ಲ.
ಇತಿಹಾಸದ ಪುಟವನ್ನೊಮ್ಮೆ ತಿರುವಿದರೆ ಇಂಥಾ ಹತ್ತಾರು ಸಾಂಕ್ರಾಮಿಕ ರೋಗಗಳು ಲಕ್ಷಾಂತರಗಟ್ಟಲೆ ಜನರನ್ನು ಹಿಂಡಿ ಬಿಸಾಕಿದ ದಾಖಲೆಗಳಿವೆ. 
ಪ್ಲೇಗ್ ಎಂಬ ಮಾರಿಯು ಐದು ಸಾವಿರ ವರ್ಷಗಳ ಹಿಂದೆಯೇ ಗ್ರೀಸ್ ಅನ್ನು ಸುಡುಗಾಡು ಮಾಡಿಹಾಕಿತ್ತು ಎಂಬ ಉಲ್ಲೇಖವಿದೆ.
1920 ರಲ್ಲಿ ಅದೇ ಪ್ಲೇಗು ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ಕಿತ್ತುಕೊಂಡಿತ್ತು. ಅದಾದ ಮೇಲೆ ಹತ್ತಾರು ಸಾಂಕ್ರಾಮಿಕಗಳು ಬೇರೆ ಬೇರೆ ಹೆಸರುಗಳಲ್ಲಿ ಬಂದಿವೆ ಕೊರೋನಾ ಅದಕ್ಕೊಂದು ಸೇರ್ಪಡೆಯಷ್ಟೇ. ಇದಿನ್ನು ಅದೆಷ್ಟು ಮಂದಿಯನ್ನು ನುಂಗುತ್ತದೋ...!
ಈ ಪ್ರಕೃತಿಯ ಸ್ವಯಂ ಶುದ್ಧೀಕರಣ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಕಾಡ್ಗಿಚ್ಚು, ಪಕ್ಷಿ ಜ್ವರ, ಸಾಗರದಲ್ಲಿ ಮೀನಿಗೆ ಬರುವ ಕ್ಯಾನ್ಸರ್ ಎಲ್ಲವೂ ಶುದ್ಧೀಕರಣದ ಸಲುವಾಗಿಯೇ ನಡೆಯುವಂಥದ್ದು. ಇತ್ತೀಚೆಗಷ್ಟೇ ಅಮೆಝಾನ್ ಕಾಡಿನಲ್ಲಿ ನಡೆದ ಕಾಡ್ಗಿಚ್ಚೂ ಅಂಥದ್ದೇ ಒಂದು. ಆದರೆ ಮನುಷ್ಯ ಸತ್ತಾಗ ಮಾತ್ರ ದೊಡ್ಡ ಕೋಲಾಹಲವಾಗುತ್ತದೆಯಷ್ಟೇ...!
ಇದೀಗ ಪ್ರಕೃತಿ ಮತ್ತೆ ಜರಡಿಯಾಡಿಸುತ್ತಿದೆ. ಅದಿನ್ನೆಷ್ಟು ಹೊಟ್ಟನ್ನು ಹೊರಗೆಸೆಯುತ್ತದೋ...!

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...