Coffee blossoms in Brazil. An anti Nature cultivation.
ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.
ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?
ಒಮ್ಮೆ ಹೋಗಿ ನೋಡಬೇಕೆಂಬ ಕುತೂಹಲ ಪ್ರಾರಂಭವಾಯಿತು.
ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ
ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆಂಬ ತವಕವಿತ್ತೋ ಅದೇ ಬ್ರೆಜಿಲ್ ಮಾದರಿ ಐವತ್ತರವತ್ತು ಎಕರೆಯಷ್ಟು ತೋಟದಲ್ಲಿದ್ದ ಹಳೆಯ ಬೃಹತ್ ಮರಗಳನ್ನೆಲ್ಲಾ ನುಂಗಿ ನೊಣೆದು ಗಹಗಹಿಸುತ್ತಾ ಬಿದ್ದುಕೊಂಡಿತ್ತು. ಥತ್ ಬ್ರೆಜಿಲ್ ಮಾದರಿಗೆ ಬೆಂಕಿ ಬೀಳಾ... ಎನಿಸಿತು. ಆ ಕ್ಷಣಕ್ಕೆ ಈ ತೋಟ ಮಾಡುತ್ತಿದ್ದವರ ಮೇಲೆ ಕೋಪವುಕ್ಕಿ ಬಂದು, 'ಇವ್ನ ಬ್ರೆಜಿಲ್ ತೋಟ ಬೇಗ ಹಾಳುಬಿದ್ದು ಹೋಗ್ಲಿ. ಹಂಗಾದ್ರೂ ಈ ತರ ಕಾಡು ಕಡ್ದು ತ್ವಾಟ ಮಾಡ್ತೀವಿ ಅಂತನ್ನೋ ಬೇರೆಯವ್ರಾದ್ರೂ ತೆಪ್ಪಗಾಗ್ತಾರೆ' ಎಂದು ಊರುಹಾಳು ಬ್ರೆಜಿಲ್ ಮಾದರಿಗೆ ಹಾಗೂ ಅದನ್ನು ಮಾಡುತ್ತಿರುವವರಿಗೆ ದಾರಿಯುದ್ದಕ್ಕೂ ಬೈದುಕೊಳ್ಳುತ್ತಾ ಹೋದೆವು.
ನಮ್ಮ ಶಾಪವೋ..! ಮಾದರಿಯ ವಿಫಲತೆಯೋ ಅಂತೂ ಮೊನ್ನೆ ಮೊನ್ನೆ ನೋಡಿದಾಗ ಬ್ರೆಜಿಲ್ ಮಾದರಿಯ ಆ ತೋಟ ಸಂಪೂರ್ಣವಾಗಿ ಹಾಳು ಬಿದ್ದಿದೆ.! ನಿಜಕ್ಕೂ ಖುಷಿ, ಬೇಸರ ಎರಡೂ ಒಟ್ಟಿಗೇ ಆಯಿತು.
ಯಾವುದೋ ದೇಶದ, ನಮ್ಮ ಪರಿಸರಕ್ಕೆ ಹೊಂದಿಕೊಳ್ಳದ ಹೆಚ್ಚೆಚ್ಚು ಹಣ ಗಳಿಸುವ ಒಂದೇ ಉದ್ದೇಶಕ್ಕಾಗಿ ವಿನಾಶಕಾರಿ ಕೃಷಿ ಪದ್ದತಿಯನ್ನು ನಮ್ಮ ಪರಿಸರಕ್ಕೆ ಅಮದು ಮಾಡಿಕೊಂಡು ಇಲ್ಲಿನ ಮೂಲ ನಿಸರ್ಗ ವೈವಿಧ್ಯವನ್ನು ಕೊಂದು ಹೇರಳವಾಗಿ ಸಂಪಾದಿಸುತ್ತೇವೆಂದು ಹೊರಟ ಪ್ರಯತ್ನವೊಂದು ಸಮೀಪದ ಭದ್ರೆಯಲ್ಲಿ ಕೊಚ್ಚಿಹೋಗಿತ್ತು. ಜೊತೆಗೆ ಈ ಹೊಸ ರೀತಿಯ ಕೃಷಿಯ ಹಪಾಹಪಿಗೆ ಅಮೂಲ್ಯ ಮರಗಳು, ಅವನ್ನು ಅವಲಂಬಿಸಿದ್ದ ಜೀವ ವೈವಿಧ್ಯಗಳೂ ನೆಲೆ ಕಳೆದುಕೊಂಡಿದ್ದವು.
Coffee culture ಅನ್ನು coffee industry ಮಾಡಲು ಹೊರಟಿದ್ದರ ಪರಿಣಾಮವದು.
ಪ್ರಕೃತಿಯನ್ನು ಕೊಂದು ಮಾಡಲು ಹೊರಡುವ ಎಲ್ಲಾ ರೀತಿಯ ಪ್ರಯೋಗಗಳು ಕಡೆಗೆ ಬಂದು ನಿಲ್ಲುವುದು ನಮ್ಮದೇ ಬುಡಕ್ಕೆ. ಅಂತಹ ಪ್ರಯತ್ನಗಳಿಂದ ಒಂದಲ್ಲ ಒಂದು ದಿನ ಪಶ್ಚಾತ್ತಾಪ ಪಡುವವರೂ ನಾವೇ...
ನಮ್ಮ ದೇಶದ ಸಮಸ್ಯೆಯೊಂದಿದೆ. 'ನಮ್ಮ ಮಾದರಿ' ಎಂಬ ಕಲ್ಪನೆಯೇ ಈ ದೇಶಕ್ಕಿಲ್ಲ. ಇದ್ದರೂ ಅದು ಯಾವತ್ತಿಗೂ ' ಹಿತ್ತಲ ಮದ್ದು'. ಅದು ಕೆಲಸಕ್ಕೆ ಬರದ ಮಾದರಿ. ನಮಗೇನಿದ್ದರೂ ಚೀನಾ, ಬ್ರೆಜಿಲ್, ಅಮೆರಿಕಾದ ಮಾದರಿಯೇ ಬೇಕು. ಅವೇ ಉತ್ಕೃಷ್ಟವಾದ್ದವು ಎಂಬ ಕುರುಡು ನಂಬಿಕೆ ನಮಗೆ. ಭವಿಷ್ಯದಲ್ಲಿ ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆಲೋಚಿಸುವಷ್ಟು ಮುಂದಾಲೋಚನೆ, ಜ್ಞಾನ ನಮಗೂ ಇಲ್ಲ ನಮ್ಮನ್ನು ಆಳುವವರಿಗೂ ಇಲ್ಲ.
ಹೀಗಾಗಿಯೇ ಎರಡನೇ ಮಹಾಯುದ್ದದಲ್ಲಿ ಯುದ್ಧ ಕೈದಿಗಳನ್ನು ಕೊಲ್ಲಲು ಬಳಸುತ್ತಿದ್ದರೆನ್ನಲಾದ ರಾಸಾಯನಿಕಗಳು ಕ್ರಿಮಿನಾಶಕ, ಕೃಷಿ ಔಷಧಿಯಾಗಿ(!) ರೂಪಾಂತರ ಹೊಂದಿ ನಮ್ಮಲ್ಲಿಗೆ ಬಂದಿದ್ದು. ಅವನ್ನು ಒಂದು ದಿನಕ್ಕೂ ಬಳಸದ ಪಾಶ್ಚಿಮಾತ್ಯರು ನಮಗೆ ಮಾರಿ ದುಡ್ಡು ಗೋರಿಕೊಂಡರೆ ನಾವು ಮಾತ್ರ ಅವುಗಳನ್ನು ಪರಮ ಪ್ರಸಾದವೆಂದು ಸ್ವೀಕರಿಸಿ ಎಲ್ಲೆಂದರಲ್ಲಿ ಬಳಸಿ ಸುಸ್ಥಿರ ಕೃಷಿಯನ್ನೂ ಅಸ್ಥಿರಗೊಳಿಸಿ ನಾವೂ ಅಸ್ಥಿಪಂಜರವಾಗುತ್ತಿದ್ದೇವೆ.!
ಅಕೇಶಿಯಾ, ನೀಲಗಿರಿ, ಮ್ಯಾಂಜಿಯಮ್, ಸಿಲ್ವರ್ ಓಕ್
ಎಲ್ಲವೂ ನಮ್ಮ ವಿದೇಶಿ ಮಾದರಿಯ ಹುಚ್ಚುತನದ ಸಾಕ್ಷಿಗಳೇ...
ಕೃಷಿಯೆಂದರೆ ಪ್ರಕೃತಿಯ ಜೊತೆ ಜೊತೆಯೇ ನಡೆಯುವಂತಹದ್ದು. ಮರಗಿಡಗಳು, ಪ್ರಾಣಿ-ಪಕ್ಷಿಗಳು, ಕ್ರಿಮಿ ಕೀಟಗಳೂ ಕೂಡಾ ಜೊತೆಗಿದ್ದರೆ ಮಾತ್ರ ಆರೋಗ್ಯಕರ ಕೃಷಿ ಸಾಧ್ಯ ಮತ್ತದು ದೀರ್ಘ ಕಾಲೀನ ಕೂಡಾ...
ಎಲ್ಲವನ್ನೂ ಕಡಿದು, ಕೊಂದು ಕೇವಲ ಬೆಳೆಯನ್ನಷ್ಟೇ ಬೆಳೆಯುತ್ತೇವೆಂದರೆ ಅದು ನಮ್ಮ ಅಂತ್ಯಕ್ಕೆ ನಾವೇ ಸೃಷ್ಟಿಸಿಕೊಳ್ಳುವ ಹಾದಿ. ಅಷ್ಟೇ...
Comments
Post a Comment