ನಾನು ಪ್ರೀತಿಯ ಬಗ್ಗೆ ಏನಾದರೂ ಬರೆದರೆ ನನ್ನ ಬಗ್ಗೆ ಗೊತ್ತಿರುವ ಕೆಲವರು ಭಯಂಕರವಾಗಿ ನಕ್ಕುಬಿಡುತ್ತಾರೆ. ಕಾರಣ ನಾನದೆಷ್ಟು ಒರಟು ಮುಂಡೇದು ಎಂದು ಅವರಿಗೆ ಗೊತ್ತು. ನನ್ನ ಆತ್ಮಬಂಧುವೊಬ್ಬರು feeling less ಕತ್ತೆ ಎಂದೇ ಕರೆಯುತ್ತಾರೆ. ನಾನೋ ಬಂಡ ನನ್ಮಗ ಅವರ ಬೈಗುಳವೆಲ್ಲಾ ನನಗೆ ತಾಗುವುದಿಲ್ಲ ಬಿಡಿ.😁
ಅದೆಲ್ಲಾ ಅತ್ಲಾಗಿರಲಿ...
ನೀವು ಗಮನಿಸಿ ನೋಡಿ ಅಥವಾ ಅನುಭವಿಸಿ ನೋಡಿ.( ಕೆಲವರು ಅನುಭವಿಸುತ್ತಲೂ ಇರಬಹುದು.!) ನಿಜವಾದ ಪ್ರೀತಿ ಹುಟ್ಟುವುದು ಕೇವಲ ಒಬ್ಬಳ/ನ ಮೇಲೆ ಮಾತ್ರ. ಮತ್ತು ಆಳವಾಗಿ ಪ್ರೀತಿಸಲು ಸಾಧ್ಯವಾಗುವುದು ಕೇವಲ ಒಂದು ಜೀವವನ್ನು ಮಾತ್ರ. ಒಂದೇಸಲಕ್ಕೆ ಇಬ್ಬರನ್ನು ಪ್ರೀತಿಸುತ್ತೇನೆ, ಮೂರು ಮತ್ತೊಬ್ಬರನ್ನು ಪ್ರೀತಿಸುತ್ತೇನೆ ಅಂದುಕೊಳ್ಳುವುದು ಮುಠಾಳತನ ಅಥವಾ ಆತ್ಮವಂಚನೆ. ಎರಡನೆಯವರನ್ನು ನೀವು ಮೋಹಿಸಬಹುದಷ್ಟೇ ಅಥವಾ ಕಾಮಿಸಬಹುದಷ್ಟೇ ಅದನ್ನೇ ಪ್ರೀತಿಯೆಂದು ಭ್ರಮಿಸಬಹುದಷ್ಟೇ. ಅದರಾಚೆಗೆ ನೀವು ಉಸ್ಸಪ್ಪಾ ಇವಳೇ/ನೇ ನನ್ನ ಜೀವ ಎಂದು ಪ್ರೀತಿಸಲು ಸಾಧ್ಯವೇ ಇಲ್ಲ. ಹಾಗೆ ಪ್ರೀತಿಸುತ್ತೇನೆ ಎಂದು ಚಾಲೆಂಜುಗೀಲೆಂಜು ಹಾಕಿದಿರೆಂದರೆ ನೀವು ಮೊದಲಿನ ಪ್ರೀತಿಗೆ ದ್ರೋಹವೆಸಗುತ್ತಿದ್ದೀರೆಂದಷ್ಟೇ ಅರ್ಥ.
ದೇಹ ಹತ್ತಾರು ಜನರ ಭಾವನೆಗಳಿಗೆ, ಕ್ರಿಯೆಗಳಿಗೆ, ಆಮಿಷಕ್ಕೆ, ಆಸೆಗೆ, ಅವತಾರಕ್ಕೆ ಬಹುಬೇಗನೆ ಸ್ಪಂದಿಸಿಬಿಡುತ್ತದೆ. ಆದರೆ ಮನಸ್ಸು ಹಾಗಲ್ಲ, ಅದು ಒಬ್ಬರಿಗೆ ಮಾತ್ರ ಸ್ಪಂದಿಸುತ್ತದೆ ಮತ್ತು ಆತುಕೊಳ್ಳುತ್ತದೆ.
ಸುಮ್ಮನೆ ಒಂದು ಪರೀಕ್ಷೆ ಮಾಡಿನೋಡಿ. ಮೊದಲನೇ ಪ್ರೀತಿ ಮತ್ತು ಎರಡನೇ ಪ್ರೀತಿ( ಎರಡನೆಯವರನ್ನೂ ನಾನು ತಳದಿಂದ ಪ್ರೀತಿಸುತ್ತೇನೆ ಎನ್ನುವವರು!) ಎರಡನ್ನೂ ಒಂದು ತಕ್ಕಡಿಗೆ ಹಾಕಿ ತೂಗುತ್ತಾ ಕುಳಿತುಕೊಳ್ಳಿ. ಮೊದಲನೆಯದು ಮಾಡುವ ತಪ್ಪುಗಳು, ಹುಚ್ಚಾಟಗಳು, ಸಣ್ಣಪುಟ್ಟ ವೀಕ್ನೆಸ್ಸುಗಳು ಎಲ್ಲವೂ ಕ್ಷುಲ್ಲಕ ಎನಿಸುತ್ತವೆ. ಅವು ವಿಪರೀತಕ್ಕೆ ಹೋದರೂ ಕ್ಷಮೆಗೆ ಅರ್ಹ. ಈಗ ಎರಡನೆಯದನ್ನು ನೋಡಿ. ಅದರ ಸಣ್ಣ ಪುಟ್ಟ ಮಿಸ್ಟೇಕುಗಳೂ ಕಿರಿಕಿರಿ ಹುಟ್ಟಿಸುತ್ತವೆ.
ಅಲ್ಲಿಗೆ ನಾವು ಕಂಡೀಷನ್ನುಗಳಿಲ್ಲದೇ ಪ್ರೀತಿಸಲು ಸಾಧ್ಯವಾಗುವುದು ಒಬ್ಬರನ್ನೇ ಎಂಬುದು ಸಾಬೀತು.
ಬಿಡಿ ಇವೆಲ್ಲಾ ಪ್ರೀತಿಸುವವರ ಕರ್ಮ. ನಮಗ್ಯಾಕೆ ಊರು ಉಸಾಬರಿ. ಇವತ್ತು ಇದೇ ವಿಚಾರವಾಗಿ ಯಾರೊಂದಿಗೋ ಚರ್ಚಿಸುವಾಗ ಇದನ್ನು ಬರೀಬೇಕನಿಸಿತು. ಸುಮ್ಮನೆ ಬರೆದೆ.
ಇಂತವನ್ನೆಲ್ಲಾ ಬರೆದು ನಾವ್ಯಾಕೆ ಮೂರು ನಾಲ್ಕು ಜನರನ್ನು ಒಟ್ಟೊಟ್ಟಿಗೆ ಪ್ರೀತಿಸುವವರಿಗೆ ಕಿರಿಕಿರಿ ಮಾಡಬೇಕು. ಅಲ್ಲವಾ !? 😉
Comments
Post a Comment