Skip to main content

ಮೂಲಿಕೆಯೆಂಬ ಮಂತ್ರದಂಡ

ಭಾರತ ನಾಟಿ ವೈದ್ಯಕ್ಕೆ ಜಗತ್ತಿಗೇ ಪ್ರಸಿದ್ದಿ.
ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ.
ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು  ಹಂಚಿಕೊಳ್ಳಬಹುದು.

ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳಿದರೆ ನನಗೊಮ್ಮೆ ದಾರಿ ತಪ್ಪಿ ಝೂ ಗೇನಾದ್ರೂ ಬಂದ್ವಾ..!? ಅಂತಾ ಅನುಮಾನವಾಯಿತು. ಇಡೀ ಊರಿಗೆ ಒಂದೇ ಮನೆ, ಸುತ್ತಾ ಕಾಡು, ಹಾಳು ಬಿದ್ದ ಗದ್ದೆಗಳು. ಮುಂಗಸಿ, ಮೊಲ, ನವಿಲುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ.!
ಸಣ್ಣ ಉಣುಗೋಲಿನ ಗೇಟು ದಾಟಿ ಒಳಹೋದರೆ ಈ ನೂರಾರು ವರ್ಷ ಹಳೆಯದಾದ ಬೃಹದಾಕಾರದ ಮನೆ. ಹಿಂದಿನ ಭಾಗ ಬಿದ್ದು ಹೋಗಿದೆ. ಎರಡು ಬಾರಿ ಕರೆದ ನಂತರ ಒಳಗಿನಿಂದ " ಹೋಯ್ ಏರು..? ಬತ್ತೆ..." ಅನ್ನೋ ಹೆಣ್ಣು ಧ್ವನಿಯೊಂದು ಕೇಳಿಸಿತು. ಹೊರ ಬಂದ ಹೆಣ್ಣುಮಗಳೊಬ್ಬರು ನಮ್ಮ ವಿಷ್ಯ ಕೇಳಿ 'ಓ.. ತಂದೆ ತೀರಿ ಹೋಗಿ ಆರು ತಿಂಗಳಾಯ್ತು, ನಾನೇ ಔಷಧಿ ಕೊಡ್ತೀನಿ..' ಅಂದರು. ಸರಿ, ಮೂಗಿಗೆ ಅದೇನೊ ರಸ ಹಾಕಿ ರಾತ್ರಿಯೊಳಗೆ ಮನೆ ಸೇರಿಕೊಳ್ಳಿ ರಾತ್ರಿಯಿಡೀ ಮೂಗಿನಿಂದ ಹಳದಿ ಬಣ್ಣದ ಸಿಂಬಳ ಹೋಗುತ್ತದೆ, ಎರಡು ದಿನ ಬಿಟ್ಟು ಇದನ್ನು ಕುಡೀರಿ, ಒಂದು ತಿಂಗಳ ನಂತರ ಇನ್ನೊಮ್ಮೆ ಬನ್ನಿ ಅಂದರು.
ಎರಡು ತಿಂಗಳು ಕಳೆಯುವಷ್ಟರಲ್ಲಿ ಯಾವ್ಯಾವುದೋ ಆಸ್ಪತ್ರೆ ತಿರುಗಿದರೂ ಗುಣವಾಗದ, ದಿನೇ ದಿನೆ ಜಾಸ್ತಿ ಯಾಗುತ್ತಿದ್ದ ಜಾಂಡೀಸ್ ಮಾಯವಾಗಿತ್ತು.!

ನಿಮಗ್ಯಾರಿಗಾದರೂ ಜಾಂಡೀಸಿಗೆ ನಾಟಿ ಔಷಧಿ ಬೇಕಿದ್ದಲ್ಲಿ ಅಲ್ಲಿಗೊಮ್ಮೆ ಹೋಗಬಹುದು.

ವಿಳಾಸ: ಶರ್ಮಿಳಾ ಹೆಗ್ಡೆ
ಗೋಳಿಯಂಗಡಿ, ಹಿಲಿಯಾಣ(ಅಂಚೆ)
ಮಂದಾರ್ತಿ, ಬ್ರಹ್ಮಾವರ, ಉಡುಪಿ.
ಮೊ: 9480402606...

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...