Skip to main content

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ!
ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ.
ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.! 
 ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.!
ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ ಹಿಡಿದು ಬೆರಸಾಡಿ ಹುಲಿಯನ್ನೇ ಊರು ಬಿಡಿಸುತ್ತಿದ್ದರು.!
ಆದರೆ ಈಗ ಎಲ್ಲವೂ exaggeration ಮನಸ್ಥಿತಿ. ಮನೆಬಾಗಿಲಿಗೆ ಒಂದು ಹಾವು ಬಂದರೂ ಮಲೆನಾಡಿನ ಜನ ಸಣ್ಣಗೆ ಬೆವರುತ್ತಿದ್ದಾರೆ. ಹುಲಿ ಬಂದರಂತೂ ಊರು ಬಿಡುವ ಮಾತನಾಡುತ್ತಾರೆ. ಅರಣ್ಯ ಇಲಾಖೆಗೆ ಶಾಪ ಹಾಕತೊಡಗುತ್ತಾರೆ.  ಬಹುಶಃ ಬದಲಾದ ಸಾಮಾಜಿಕ ಸ್ಥಿತಿಗತಿಗಳು ಕಾರಣವೇನೋ...  ನಾವು Delicate ಆಗುತ್ತಿರುವುದರ ಸೂಚಕವೂ ಇರಬಹುದು.
ಎಲ್ಲದಕ್ಕಿಂತಾ ಹೆಚ್ಚಾಗಿ 'ಬದುಕಿಗಾಗಿ ಕೃಷಿ' ಎಂಬುದು ಮರೆಯಾಗಿ 'ಕೃಷಿಗಾಗಿಯೇ ಬದುಕು' ಎಂಬ ಕಾಲಮಾನದಲ್ಲಿ ಬದುಕುತ್ತಿರುವುದೂ ಕಾರಣವಿರಬಹುದೇನೋ... ಹೀಗಾಗಿ ನಮಗೀಗ ನಮಗಿಂತ ಶಕ್ತಿಶಾಲಿಯಾದ ಯಾವ ಜಂತುವೂ ನಮ್ಮ ಪರಿಸರದೊಳಕ್ಕೆ ಬರುವುದು ಸಹ್ಯವಾಗುತ್ತಿಲ್ಲ.!

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...