ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...?
ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ.
ಎರಡನೇ ಮುಖ್ಯ ಕಾರಣ ಮಲೆನಾಡಿನಲ್ಲಿ ರೈತರು ಸಾಮೂಹಿಕವಾಗಿ ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದು.
ಮಲೆನಾಡಿನ ಭತ್ತ ಮಳೆಯಾಶ್ರಿತ ಬೆಳೆ, ಇದಕ್ಕೆ ಹೊರಗಿನಿಂದ ನೀರು ಹಾಯಿಸಿ ಭತ್ತ ಬೆಳೆಯುವ ಅಗತ್ಯವಿಲ್ಲ. ಮಲೆನಾಡಿನ ಗದ್ದೆಗಳು ಒಂದುರೀತಿಯ Natural reservoir. ಸುರಿಯುವ ಮಳೆಯನ್ನೆಲ್ಲಾ ತನ್ನೊಳಗೆ ಹಿಡಿದಿಟ್ಟುಕೊಂಡು ಭತ್ತದ ಪೈರಿನ ಜೊತೆಗೆ ಜಲಮೂಲಗಳೂ ಹುಲುಸಾಗಿರುವಂತೆ ನೋಡಿಕೊಳ್ಳುತ್ತವೆ. ಗದ್ದೆಗಳು ಸಣ್ಣಸಣ್ಣ ಕೆರೆಗಳಂತೆ ನೀರುಹಿಡಿದಿಟ್ಟುಕೊಂಡು ತಿಂಗಳುಗಟ್ಟಲೆ ನಿಧಾನಕ್ಕೆ ಭೂಮಿಯೊಳಕ್ಕೆ ನೀರಿಳಿಸುತ್ತಾ, ಹೆಚ್ಚುವರಿ ನೀರನ್ನು ಗದ್ದೆಬಯಲಿನ ಬದಿಯಲ್ಲಿ ಹರಿಯುವ ಸಣ್ಣ ಹಳ್ಳ ಅಥವಾ ತೊರೆಗಳಿಗೆ ಬಿಡುತ್ತಾ ತೊರೆಗಳು ಜೀವಂತವಿರುವಂತೆ ನೋಡಿಕೊಳ್ಳುತ್ತವೆ, ಇತ್ತ ತೊರೆಯು ಬಿರುಇಸಿಲಿನಲ್ಲಿಯೂ ತೆಳ್ಳಗೆ ಹರಿಯುತ್ತಾ ತಾನು ಸೇರುವ ಹೊಳೆಯನ್ನು ಬತ್ತದಂತೆ ಕಾಪಿಡುತ್ತದೆ. ಒಂದಕ್ಕೊಂದು ಕೊಂಡಿಯಾಗಿರುವ ಈ ಜಲ ಪೂರಣ ವ್ಯವಸ್ಥೆ ಬೇಸಿಗೆಯಲ್ಲೂ ಭೂಮಿಯು ಬಸವಳಿಯದಂತೆ ನೋಡಿಕೊಳ್ಳುತ್ತದೆ.
ಆದರೆ ಹತ್ತು ವರ್ಷಗಳಿಂದೀಚೆಗೆ ನಿಧಾನಕ್ಕೆ ಭತ್ತದ ಬೆಳೆ ಮರೆಯಾಗುತ್ತಾ ಬಂತು, ಬಹುತೇಕ ಗದ್ದೆ ಪ್ರದೇಶಗಳು ಪಾಳು ಬಿದ್ದವು. ಇನ್ನುಳಿದ ಭಾಗದಲ್ಲಿ ಭತ್ತದ ಜಾಗಕ್ಕೆ ಪರಿಸರ ಮಾರಕ ಶುಂಠಿ ಬಂದು ಕೂತು ಜಲವ್ಯವಸ್ಥೆಯ ಜೊತೆಗೆ ಅಮೂಲ್ಯ ಜಲಚರಗಳನ್ನೂ ಕೊಂದು ಹಾಕಿತು. ಗದ್ದೆಗಳು ಬೀಳು ಬಿದ್ದ ಪರಿಣಾಮ ನೀರು ಎಲ್ಲೂ ನಿಲ್ಲದೇ ಮಳೆ ಸುರಿದಾಗೆಲ್ಲಾ ಸೀದಾ ಹೊಳೆಯ ಕಡೆ ನುಗ್ಗಿ ಹರಿದುಹೋಯಿತು. ಇತ್ತೀಚೆಗಂತೂ ಭತ್ತದ ಬೆಳೆ ತನ್ನ ಮಿತಿಮೀರಿದ ಬೇಸಾಯದ ವೆಚ್ಚ ಹಾಗೂ ಕಾರ್ಮಿಕರ ಕೊರತೆಯಿಂದಾಗಿ, ಆನೆಯಂತಹ ಕಾಡುಪ್ರಾಣಿಗಳ ನಿರಂತರ ಹಾವಳಿಯಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಸಾಗಿದೆ. ಬಹುತೇಕ ಗದ್ದೆಗಳೆಲ್ಲಾ ಕಾಫಿ, ಅಡಿಕೆ ತೋಟಗಳಾಗಿವೆ. ಇನ್ನು ನೀರು ನಿಲ್ಲುವುದೆಲ್ಲಿಂದ ಬಂತು.!?
ಬೋರ್ ವೆಲ್ ಎಂದರೇನೆಂದೇ ಇತ್ತೀಚಿನವರೆಗೂ ತಿಳಿದಿರದ ಮೂಡಿಗೆರೆಯಂತಹ ಮಲೆನಾಡಿನ ಊರುಗಳಲ್ಲೀಗ ಬೋರ್ ಲಾರಿಗಳದೇ ಸದ್ದು...
Comments
Post a Comment