Skip to main content

ಅಕೇಷಿಯಾ ಹಾಗೂ ಮ್ಯಾಂಜಿಯಮ್

 ಸುಮಾರು 2004-05 ರ ಸಮಯದಲ್ಲಿ ಅರಣ್ಯ ಇಲಾಖೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಮ್ಯಾಂಜಿಯಮ್ ಎಂಬ ಮಲೇಶಿಯಾ ಮೂಲದ ಗಿಡಗಳನ್ನು ಉಚಿತವಾಗಿ ಹಂಚಿತ್ತು. ನನಗಿನ್ನೂ ನೆನಪಿದೆ, ಗಿಡಗಳನ್ನು ಇಲಾಖೆಯ ನೌಕರರು ಎಷ್ಟು ಉತ್ಸಾಹದಿಂದ ಹಂಚಿದ್ದರೆಂದರೆ, ತಮ್ಮ ಈ ಮ್ಯಾಂಜಿಯಮ್ ನಿಂದ ಇಡೀ ಊರು ಉದ್ಧಾರವಾಗಿಬಿಡುತ್ತದೆಯೆಂಬಂತಾಡುತ್ತಿದ್ದರು. 

ಹಲವಾರು ಜನ ನೆಟ್ಟರು. ನಾನೂ ನೆಟ್ಟೆ. 

  ನೇರವಾಗಿ ಎತ್ತರಕ್ಕೆ ಬೆಳೆದು ಹರಡಿಕೊಳ್ಳುವ ಈ ಮರ ತನ್ನ ಕಾಲಬುಡದಲ್ಲಿ ಅದರಪ್ಪನಾಣೆಗೂ ಒಂದೇ ಒಂದು ಲಂಟಾನದ ಗಿಡವನ್ನೂ ಸಹ ಬೆಳೆಯಲು ಆಸ್ಪದ ಕೊಡಲಿಲ್ಲ. ತನ್ನ ವ್ಯಾಪ್ತಿಯ ಸುತ್ತಾ ಮಳೆಗೆ ಕೊಳೆಯದ, ಬಿಸಿಲಿಗೆ ಮಣ್ಣಾಗದ ಪ್ಲಾಸ್ಟಿಕ್ ನ ಸೋದರನಂತಹ ಎಲೆಯನ್ನುದುರಿಸುತ್ತಾ ಹಾಯಾಗಿ ತೂಗಾಡುತ್ತಾ ನಿಂತಿತು. ಯಾವತ್ತಿಗೂ ಒಂದು ಹಣ್ಣನ್ನು ಬಿಡದ, ಹೂವನ್ನೂ ಸೃಷ್ಟಿಸದ ಹಕ್ಕಿಗಳಿಗಾಗಿ ರೆಂಬೆಯನ್ನೂ ಚಾಚದ ಬಿಕನಾಸಿ ಮರ ಅರಣ್ಯ ಇಲಾಖೆಗೆ ಕಲ್ಪವೃಕ್ಷದಂತೆ ಕಂಡಿದ್ದು ಮಾತ್ರ ಈ ಶತಮಾನದ ಕೌತುಕ.! 


ಗಿಡ ಅತಿ ವೇಗವಾಗಿ ಬೆಳೆದು ಆರು ತಿಂಗಳೊಳಗೆ ಆರಡಿ ದಾಟಿತು. ಏಳನೆ ತಿಂಗಳು ತುಂಬುವ ಹೊತ್ತಿಗೆ " ಮ್ಯಾಂಜಿಯಮ್  ಪರಿಸರಕ್ಕೆ ಧಕ್ಕೆ ತರುವ ಜಾತಿಯಾಗಿರುವುದರಿಂದ ಯಾರೂ ಕೂಡಾ ಬೆಳೆಯಬಾರದು" ಎಂಬ ಆದೇಶವೊಂದು ಸರ್ಕಾರದಿಂದ ಹೊರಬಿತ್ತು.! ನಾನು ಮ್ಯಾಂಜಿಯಮ್ ಬಿಟ್ಟು ಬೇರೇನೂ ಬೆಳೆಯುವುದಿಲ್ಲ ಎಂದು ಗೋಳು ಹುಯ್ಯುತ್ತಾ ಯಾವನು ತಾನೆ ಇವರ ಕಛೇರಿ ಬಾಗಿಲಿಗೆ ಹೋಗಿದ್ದ. !? 

ನಾನು ಬೇಲಿ ಕಡಿಯುವಾಗ ಮ್ಯಾಂಜಿಯಮನ್ನೂ ಸೇರಿಸಿ ಕಡಿದು ಹಾಕಿದೆ. ಆದರೆ ಒಂದಷ್ಟು ಜನ ಪಾಪ ಜತನವಾಗಿ ಬೆಳೆಸಿದ ಊರುಹಾಳು ಮರಗಳು ಈಗಲೂ ಕೆಲವರ ಮನೆಬಾಗಿಲಿನಲ್ಲಿವೆ. 

ತಾವೇ ವಿತರಿಸಿ ತಾವೇ ಬೆಳೆಯಲು ಪ್ರೋತ್ಸಾಹಿಸಿದ ಆರೇ ತಿಂಗಳಿಗೆ ತಾವೇ ಬೆಳೆಯುವುದನ್ನು ನಿಷೇಧಿಸಿದ ಘನ ಅರಣ್ಯ ಇಲಾಖೆಯ , ಅದರ ಮೇಲಿನ ಸರ್ಕಾರದ ಒಳನಿಲುವು  ಏನಿದ್ದಿರಬಹುದೆಂದು ನಾನು ಬಿಡಿಸಿ ಹೇಳಬೇಕಿಲ್ಲವಲ್ಲ.! 


ಹೀಗೆ ಬಿರುಗಾಳಿಯಂತೆ ಬಂದುಹೋದ ಪ್ಲಾಸ್ಟಿಕ್ ಮರ ಮತ್ತಾರೂ ಅಲ್ಲ, ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಂಚಲನವೆಬ್ಬಿಸಿರುವ ಅಕೇಷಿಯಾದ ಅಣ್ತಮ್ಮ. 


ಅವತ್ತ್ಯಾವನೋ ಸರ್ಕಾರದವನು  ಶಿವಮೊಗ್ಗ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ಮಾಡುತ್ತೇವೆಂದು ಒದರುತ್ತಿದ್ದ. ಆ ಮಂಕಿ ಪಾರ್ಕಿನೊಳಗೆ ಮೊದಲು ಇವನಂತವನನ್ನು ಕೂಡಿಹಾಕಬೇಕು. 

ಇಡೀ ನೈಸರ್ಗಿಕ ಕಾಡನ್ನು ಬಗೆದು ತಿಂದು ಅಲ್ಲೆಲ್ಲಾ ಏಕಜಾತೀಯ ಅಕೇಸಿಯಾವನ್ನು ನೆಟ್ಟು ದಶಕಗಳ ಕಾಲ ಮಂಗ ಹಾಗೂ ಆ ನೈಸರ್ಗಿಕ ವ್ಯವಸ್ಥೆಯನ್ನೇ ನಂಬಿಕೊಂಡಿದ್ದ ಜೀವಿಗಳಿಗೆ ತಿನ್ನಲು ಒಂದೇ ಒಂದು ಹಣ್ಣೂ ಸಿಗದಂತೆ ಮಾಡಿ ಒಂದಿಡೀ ಜೀವವೈವಿಧ್ಯವನ್ನೇ ಕೊಂದವರು ಆ ಪಾಪವನ್ನು ತೊಳೆದುಕೊಳ್ಳುವ ಸಲುವಾಗಿ ಈಗಲಾದರೂ ನೈಸರ್ಗಿಕ ಅರಣ್ಯ ಬೆಳೆಸುವ ಕಡೆಗೆ ಆಲೋಚಿಸದೇ ಮಂಕಿ ಪಾರ್ಕ್ ಮಾಡುತ್ತಾರಂತೆ.! ಇದೀಗ ಈ ಬಿಕನಾಸಿಗಳು ಮತ್ತೆ ನಲವತ್ತು ವರ್ಷ ಲೀಸ್ ಅವಧಿ ವಿಸ್ತರಿಸಲು ಹೊರಟಿರುವುದು ನಾವೆಂತಹಾ ತಲೆಹಿಡುಕರಿಗೆ ಅಧಿಕಾರ ಕೊಟ್ಟಿದ್ದೇವೆ ಎಂಬ ಕಹಿ ಸತ್ಯವನ್ನು ಸಾರಿ ಸಾರಿ ಹೇಳುತ್ತಿದೆ. 


ಇದೇ ವಿಚಾರವಾಗಿ ಸಂಜೆ ಶ್ರೀಧರಣ್ಣನೊಂದಿಗೆ ಮಾತನಾಡುತ್ತಿದ್ದೆ. ಅವರು ' ಮಲೆನಾಡಿನ ರಾಜಕಾರಣಿಗಳು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿದ್ದಾರೆ' ಎಂದರು. 

ರಾಜಕಾರಣಿಗಳಷ್ಟೇ ಅಲ್ಲ, ಒಂದಷ್ಟು ಕನಿಷ್ಟ ಸಂಖ್ಯೆಯ  ಜನರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಸಂವೇದನೆ ಕಳೆದುಕೊಂಡು ಬದುಕುತ್ತಿದ್ದಾರೆ ಎಂದೆ.

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...