ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!
ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.
ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು. ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.
ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.
ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,
ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.
ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟುತ್ತದೆ, ಪತ್ರಿಕೆಗಳು ಬಸ್ಸಿಳಿದು ಓಡಿಹೋಗಿವೆ. ಈಗ ಪತ್ರಿಕೆಗಳ ಮಾರಾಟ ತಳಮುಟ್ಟಿವೆ. ಓದುವುದರಲ್ಲೂ ಇದು ಎಡದ್ದು , ಇದು ಬಲದ್ದು ಎಂದು ಹಂಚಿಹೋಗಿವೆ. ಬರೆಯುವವರೂ ಪಂಥಕ್ಕೆ ಅಂಟಿಕೊಂಡಿದ್ದಾರೆ.! ಬಹುಪಾಲು ಪತ್ರಿಕೋದ್ಯಮವೂ ಹೀಗೆಯೇ ನಡೆದುಕೊಳ್ಳುತ್ತಿದೆ.
ಈಗ ಪತ್ರಿಕೆ, ಪುಸ್ತಕಗಳು ಬೋರು ಹೊಡೆದು ಮೊಬೈಲು ಜನರಿಗೆ ಆಪ್ತವಾದಂತೆಯೇ ಮುಂದೊಂದು ದಿನ ಮೊಬೈಲ್ ಕೂಡಾ ಬೋರಾಗಿ ಮತ್ತೆ ಪತ್ರಿಕೆಯತ್ತ ಕಣ್ಣು ಹಾಯಿಸುವಂತಾದರೆ ಮತ್ತೆ ಬಸ್ಸೊಳಗೆ ಪತ್ರಿಕೆಯೆಂಬ ಅಕ್ಷರ ಸುಂದರಿ ಸಂಭ್ರಮದಿಂದ ಓಡಾಡಬಹುದೇನೋ...!?
ಆ ಕಾಲ ಮತ್ತೆ ಬರಲಿ..
Comments
Post a Comment