ಇವತ್ತು ನಮ್ಮ ಊರಿನ ಬಳಿಯ ಹುಡುಗನೊಬ್ಬನ ಆತ್ಮಹತ್ಯೆಯ ಸುದ್ದಿ ಕೇಳಿ ಮನಸ್ಸಿಗೆ ಪಿಚ್ಚೆನಿಸಿತು. ಫೋಟೊ ನೋಡಿದರೆ, ಹುಡುಗನ ವಯಸ್ಸು ಇಪ್ಪತ್ತೋ ಇಪ್ಪತ್ತೆರಡೋ ಇರಬಹುದೇನೋ... ಈ ವಯಸ್ಸಿನಲ್ಲಿ ಕೈಯ್ಯಾರೆ ಜೀವ ಕಳೆದುಕೊಳ್ಳುವಂತಹ ಕಷ್ಟ, ಸಮಸ್ಯೆ ಏನಿದ್ದೀತು.!? ಸಂಸಾರದ ಹೊರೆಯಾ ?, ವ್ಯಾಪಾರ ನಷ್ಟವಾ ? ತೀರಿಸಲಾಗದಷ್ಟು ಸಾಲವಾ ? ಉದ್ಯೋಗ ನಷ್ಟ ? ಏನಿದ್ದೀತು... ?
ಹೆಚ್ಚೆಂದರೆ ಪರೀಕ್ಷೆಯಲ್ಲಿ ಫೇಲು, ಮನೆಯಲ್ಲಿ ಬೈಗುಳ, ಕೈ ಕೊಟ್ಟ ಹುಡುಗಿಯ infatuation( ಅದನ್ನೇಹುಡುಗರು ಅಮರ ಪ್ರೇಮವೆಂದು ಭ್ರಮಿಸುತ್ತಾರೆ), ಎಲ್ಲದಕ್ಕಿಂತಾ ದೊಡ್ಡದು ತಾಳ್ಮೆಯೇ ಇರದ ದುಡುಕುತನ ಹಾಗೂ ಮುಂಗೋಪ. ಇವಿಷ್ಟೇ... ಇದರಲ್ಲೊಂದು ಸಮಸ್ಯೆ ಹುಡುಗ/ಹುಡುಗಿಯರನ್ನು ಬೆಟ್ಟದಂತೆ ಕಾಡಿ ಕೊಂದುಬಿಡುತ್ತದೆ. ಇವಕ್ಕಿಂತಾ ಹೆಚ್ಚಿನದ್ದು ಒಂದೇ ಒಂದು ಸಮಸ್ಯೆ( ಅಸಲಿಗೆ ಇವು ಸಮಸ್ಯೆಗಳೇ ಅಲ್ಲ!) ಈ ವಯಸ್ಸಿನವರಿಗಿದ್ದರೆ ಕೇಳಿ.
ಇವತ್ತಿನ ಸಾಮಾಜಿಕ ವ್ಯವಸ್ಥೆ ಯುವ ಮನಸ್ಸುಗಳನ್ನು ಹೇಗೆ ದುರ್ಬಲವನ್ನಾಗಿಸಿದೆ ಎಂಬುದಕ್ಕೆ ಇಂಥಾ ಉದಾಹರಣೆಗಳು ದಿನಂಪ್ರತಿ ನಮಗೆ ದೊರಕುತ್ತಲೇ ಇರುತ್ತವೆ.
ಗಮನಿಸಿ ನೋಡಿ, ಇಂದಿನ ಹುಡುಗರದ್ದು ಎಲ್ಲವೂ ಅತಿ ವೇಗ, ಅತಿರೇಕ, ಅತಿ ಭಾವುಕ. ತಾವು ಬಯಸಿದ್ದೆಲ್ಲವೂ ಅಂದುಕೊಂಡ ಸಮಯದೊಳಗೆ ದಕ್ಕಿಬಿಡಬೇಕೆಂಬ ಕಾತರ. ತಾವು ಮಾಡುತ್ತಿರುವುದೇ ಸರಿ ಹಾಗೂ ಇದು ಮಾತ್ರ ಸರಿ ಎಂಬ ಹುಂಬತನ. ಸಣ್ಣ ಸೋಲನ್ನೂ ಬೆಟ್ಟದಂತೆ ಭ್ರಮಿಸುವ ಭಾವುಕತನ.
ಹಾಗಾಗಿಯೇ ಅಪ್ಪ ಬೈಕು ಕೊಡಿಸಲಿಲ್ಲವೆಂದು, ದೂರದ ಪ್ರವಾಸಕ್ಕೆ ಅನುಮತಿಸಲಿಲ್ಲವೆಂದು, ಪಾರ್ಟಿಗೆ ದುಡ್ಡು ಕೊಡಲಿಲ್ಲವೆಂಬ ಕಾರಣಕ್ಕೆ ಜೀವ ಕಳೆದುಕೊಳ್ಳುತ್ತಾರೆ.!
ಈಗಿನ ಆರ್ಥಿಕ ಪ್ರಧಾನ ವ್ಯವಸ್ಥೆಯೊಳಗೆ ಬಹುತೇಕ ಹುಡುಗರಿಗೆ ಅಪ್ಪ ದುಡ್ಡಿನ ಮಷೀನ್. ಅಪ್ಪ-ಅಮ್ಮನಿಗೆ ಮಕ್ಕಳು , ತಾವು ಬಯಸಿದ್ದನ್ನೆಲ್ಲಾ ಸಾಧಿಸಲೋಸ್ಕರವೇ ಇರುವ ರೋಬೋಟ್ ಗಳು. ಇವೆರಡು ತದ್ವಿರುದ್ದ ಕಲ್ಪನೆಗಳು ಯಾವ ಮನೆಯಲ್ಲಿರುತ್ತವೋ, ಅಲ್ಲಿ ನಿರಂತರ ತಿಕ್ಕಾಟಗಳು ಇದ್ದೇ ಇರುತ್ತವೆ. ಇಲ್ಲಿ ಅಂತಿಮವಾಗಿ ಬಲಿಯಾಗುವುದು ಮಕ್ಕಳೇ.
ಮಗ ಬೈಕು ಬೇಕೆಂದು ಹಠ ಹಿಡಿದ, ಮಗಳು ಪರೀಕ್ಷೆಯಲ್ಲಿ ಫೇಲಾದಳು ಅಂತಾ ಯಾವ ಅಪ್ಪ ಅಮ್ಮನೂ ಆತ್ಮಹತ್ಯೆಗಿಳಿಯುವುದಿಲ್ಲ.!
ಈ ತಿಕ್ಕಾಟದಲ್ಲಿ ಮಕ್ಕಳೇ ಯಾಕೆ ಜೀವ ಕಳೆದುಕೊಳ್ಳುತ್ತಾರೆಂದರೆ, ಅಪ್ಪ- ಅಮ್ಮ, ಮಕ್ಕಳನ್ನು ಭವಿಷ್ಯದ ಏರಿಳಿತಗಳಿಗೆ ಸಜ್ಜುಗೊಳಿಸಿರುವುದಿಲ್ಲ. ಸ್ವತಃ ತಾವೇ ಹೇಗಿರಬೇಕೆಂಬ ಸ್ವಯಂ ಶಿಕ್ಷಣಕ್ಕೊಳಗಾಗುವುದಿಲ್ಲ.
ತಂದೆ - ತಾಯಿಯ ಹುಸಿ ಪ್ರತಿಷ್ಟೆ, ಬದುಕಿನ ಧಾವಂತ, ಮಕ್ಕಳಿರುವುದೇ ತಾವಂದುಕೊಂಡಿದ್ದನ್ನು ಕಡಿದು ಕಟ್ಟೆ ಹಾಕಲು ಎಂಬ ಪೊಳ್ಳು ನಂಬಿಕೆ ಮಕ್ಕಳೊಳಗೆ ಅಭದ್ರತೆಯ ಭಾವವನ್ನು ನಿಧಾನಕ್ಕೆ ಬಿತ್ತುತ್ತಾ ಹೋಗುತ್ತದೆ.ಇದರಲ್ಲೊಂದು ಸಂಗತಿ ಏರುಪೇರಾದರೂ ಅದು ಮಕ್ಕಳ ಕುತ್ತಿಗೆಯ ಸಮೀಪಕ್ಕೆ ಬಂದು ನಿಲ್ಲುತ್ತದೆ.
ಇನ್ನು ಮಕ್ಕಳ ವಿಚಾರಕ್ಕೆ ಬಂದರೆ, ಈ ಕೆಟ್ಟ ಸ್ಪರ್ಧಾತ್ಮಕ ಜಗತ್ತು ಹುಡುಗರೊಳಗೆ insecurity, false ego, ದುಡುಕುತನ ಎಲ್ಲವನ್ನೂ ಧಾರಾಳವಾಗಿ ತುಂಬಿದೆ. ಇವೆಲ್ಲವೂ ಆಧುನಿಕ ಶಿಕ್ಷಣ, ಜೀವನ ಪದ್ಧತಿಯ ಕೊಡುಗೆ!
ಇವೆಲ್ಲವನ್ನೂ ಎದುರಿಸಿ ಹುಡುಗರು ಮೂವತ್ತಕ್ಕೆ ಕಾಲಿಟ್ಟರೆಂದರೆ ಅವರನ್ನು ಯಾವ ಇಸಂಗಳೂ, ಇಗೋಗಳೂ ಬಾಧಿಸಲಾರವು. ಇಪ್ಪತ್ತರಿಂದ ಮೂವತ್ತರ ತನಕದ ಪ್ರಯಾಣ ಬದುಕಿನ ಹಲವು ಮುಖಗಳನ್ನು ಪರಿಚಯಿಸುತ್ತಾ, ಜೊತೆಜೊತೆಗೆ ಅವರನ್ನು ನಿಧಾನಕ್ಕೆ ಗಟ್ಟಿಗೊಳಿಸುತ್ತಾ ಕರೆದೊಯ್ಯುತ್ತದೆ.
ಮೇಲೆ ಹೇಳಿದ ಯಾವ ಸಂಗತಿಯೂ ಉಪದೇಶವಲ್ಲ, ಬೋಧನೆಯಲ್ಲ. ಅವೆಲ್ಲವನ್ನೂ ದಾಟಿ ಬಂದ ನನ್ನಂತಹವರ ಬದುಕಿನ ಅನುಭವಗಳು.
ಜೀವನಾನುಭವ ಎಂಬುದು ತೂತು ಬಿದ್ದ ದೊಡ್ಡ ಪಾತ್ರೆಯಂತೆ. ಯಾವತ್ತಿಗೂ ನೀರು ತುಂಬುವುದೇ ಇಲ್ಲ. ಬದುಕಿನುದ್ದಕ್ಕೂ ನಾವು ಉಸಿರು ಬಿಗಿದು ನೀರು ಸೇದಿ ಸುರಿಯುತ್ತಲೇ ಇರಬೇಕು. ಇಪ್ಪತ್ತಕ್ಕೊಂದು ಅನುಭವವಾದರೆ , ಮೂವತ್ತು ತಲುಪುವ ಹೊತ್ತಿಗೆ ಮತ್ತೊಂದಷ್ಟು ಅನುಭವ. ಉಸ್ಸಪ್ಪಾ! ನಾನು ಎಲ್ಲವನ್ನೂ ಕಲಿತುಬಿಟ್ಟೆ, ಜೀವನದಲ್ಲಿ ಏನೇನೋ ಕಂಡು ಅನುಭವಿಸಿಬಿಟ್ಟೆ ಎಂದು ಕಾಲು ನೀಡಿ ಖುರ್ಚಿಗೊರಗುವಷ್ಟರಲ್ಲಿ ಮೂವತ್ತೈದರ ಹೊಸ ಪಾಠಗಳು ಬೆತ್ತ ಹಿಡಿದು ನಿಂತಿರುತ್ತವೆ.
ಮನುಷ್ಯನ ಉಸಿರು ನಿಲ್ಲುವ ತನಕವೂ ಪಾಠವೆಂಬುದು ನಿರಂತರ ಪ್ರಕ್ರಿಯೆ.
ಮೊನ್ನೆ ಯಾವುದೋ ವಿಚಾರ ಮಾತನಾಡುತ್ತಾ Vijayakka , ನೀನು ಹೇಳುತ್ತಿರುವ ವಿಚಾರಗಳ್ಯಾವೂ ನನಗೆ 'ಓಹೋ ಹೌದಾ..!' ಎಂಬಂತಹ ಆಶ್ಚರ್ಯ ತರುವುದಿಲ್ಲ. ಕಾರಣ, ಅವನ್ನೆಲ್ಲಾ ನೋಡಿ, ಅನುಭವಿಸಿಯೇ ನಾನಿಲ್ಲಿಗೆ ಬಂದು ನಿಂತಿರುವುದು ಎಂದರು.
ಅವರು ಹೇಳಿದ್ದನ್ನೇ ನನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದೆ. ಅವ್ರು ಹೇಳಿದ್ದು ತಪ್ಪು, ಈ ವಯಸ್ಸಿಗೇ ನಂಗೆಲ್ಲಾ ಜೀವನಾನುಭವನೂ ಆಗಿದೆ. ಆರು ದೇಶ ತಿರುಗಿದೀನಿ, ಬೇರೆ ಬೇರೆ ಕಂಪೆನಿಗಳಲ್ಲಿ ಕೆಲ್ಸ ಮಾಡಿದೀನಿ, ಕಷ್ಟ ಪಟ್ಟಿದೀನಿ, ಚಿಕ್ಕ ವಯಸ್ಸಿಗೇ ದುಡ್ಡು ನೋಡಿದೀನಿ ಅಂದಳು.
ಅದಕ್ಕೇ ಹೇಳಿದ್ದು ನಿಂಗೇನೂ ಅನುಭವವಿಲ್ಲ ಅಂತಾ. ಎಂದು ನಕ್ಕೆ.
Comments
Post a Comment