ಮನುಷ್ಯ ಪ್ರತೀ ಬಾರಿ ಸೋತಾಗಲೂ ಕನಿಷ್ಟ ಐದು ವರ್ಷ ಹಿಂದಕ್ಕೆ ಹೋಗಿಬಿಡುತ್ತಾನೆ. ಪ್ರತೀ ಸೋಲು ದೈಹಿಕವಾಗಿ ವೃದ್ದಾಪ್ಯದೆಡೆಗೆ ದೂಡಿದರೆ, ಮಾನಸಿಕವಾಗಿ ಕುಬ್ಜನನ್ನಾಗಿಸುತ್ತದೆ.
ಸೋತ ವ್ಯಕ್ತಿಯ ಸುತ್ತಲಿನ ಗೆಳೆಯರು, ಸಮವಯಸ್ಕರು, ಕಿರಿಯರು ಆತನನ್ನು ಹಿಂದಕ್ಕೆ ಸರಿಸಿ ಹಲವು ಮೈಲಿಗಳಷ್ಟು ದೂರ ಮುಂದೆ ಹೋಗಿಬಿಟ್ಟಿರುತ್ತಾರೆ. ಆಗಲೇ ಮನುಷ್ಯ ಆಮೆಯಂತಾಗಿಬಿಡುವುದು... ಸೋಲಿಗೆ ಹೆದರಿ, ಸಮಾಜಕ್ಕೆ ಅಂಜಿ, ಯಾರನ್ನಾದರೂ ಎದುರುಗೊಳ್ಳುವ ಅವಕಾಶವನ್ನು ತಪ್ಪಿಸಲೆತ್ನಿಸುತ್ತಾ ಏಕಾಂತದೊಳಗೆ ತಲೆ ಹುದುಗಿಸಿಕೊಂಡುಬಿಡುತ್ತಾನೆ...
ಇತ್ತ ದರವೇಸಿ ಸೋಲು ಕೂಡಾ ಸೋತವನ ಮೇಲೆಯೇ ಮತ್ತೆ ಮತ್ತೆ ದಾಳಿಯಿಡತೊಡಗುತ್ತದೆ. ಹಣಕಾಸು, ಉದ್ಯೋಗ, ವ್ಯವಹಾರ, ಪ್ರೀತಿ, ಮದುವೆಯಂತಹ ವಿಷಯಗಳಲ್ಲಿ ಮತ್ತೆ ಮತ್ತೆ ಕಾಲೆಳೆದು ಬೀಳಿಸತೊಡಗುತ್ತದೆ.
ಅಂಥದ್ದೊಂದು ಯಾತನೆ ಅನುಭವಿಸಿದವರಿಗೇ ಗೊತ್ತು. ದಿನನಿತ್ಯದ ಖರ್ಚುಗಳನ್ನು ತೂಗಿಸಲು, ತೆಗೆದುಕೊಂಡ ಸಾಲ ತೀರಿಸಲು ಪರದಾಡುವಾಗ, ಮದುವೆಗೆ ಹುಡುಗಿ ಸಿಗದೇ ವಯಸ್ಸು ಮೀರುವಾಗ, ಹಿಡಿದ ಕೆಲಸಗಳು ಹೊಳೆಯಲ್ಲಿನ ಹುಣಸೆ ಹಣ್ಣಾದಾಗ, ತನಗಿಂತ ಕಡಿಮೆ ಓದಿದ, ಕಡಿಮೆ ಬುದ್ದಿ ಮತ್ತೆಯ, ಕಡಿಮೆ ಯೋಗ್ಯತೆಯ, ಕಡಿಮೆ ವಯಸ್ಸಿನ , ತನ್ನಿಂದಲೇ ಸಹಾಯ ಪಡೆದ, ಕೆಲವೇ ವರ್ಷಗಳ ಕೆಳಗೆ ತನ್ನೆದುರು ಏನೂ ಅಲ್ಲದ ಜನಗಳು ತಾನು ಸೋತ ವಿಷಯಗಳಲ್ಲೆಲ್ಲಾ ಗೆದ್ದು ತನ್ನೆದುರೇ ಚೆಂದದ ಬದುಕನ್ನು ಬದುಕುವಾಗ ಆಗುವ ನಿರಾಸೆ, ನೋವು, ತನ್ನ ಪರಿಸ್ಥಿತಿಯ ವಿರುದ್ಧ ಹುಟ್ಟುವ ಆಕ್ರೋಶ ಒಳಗೇ ಜ್ವಾಲಾಮುಖಿಯಂತೆ ಕುದಿಯುತ್ತಾ ತನ್ನ ಕೆನ್ನಾಲಿಗೆ ಚಾಚಿ ದಹಿಸತೊಡಗಿ ಮಾನಸಿಕವಾಗಿ ಇನ್ನಷ್ಟು ಸಾಯಿಸಿಬಿಡುತ್ತದೆ. ಕೆಲವರನ್ನು ದೈಹಿಕವಾಗಿಯೂ ಕೊಲ್ಲುತ್ತದೆ.
ಪದೇ ಪದೆ ಸೋಲುವವನಿಗೆ ನಡುವಿನಲ್ಲಿ ಒಂದಾದರೂ ಗೆಲುವು ದಕ್ಕಬೇಕು. ಕನಿಷ್ಟ ಮತ್ತೆ ಎದುರಾಗುವ ಸೋಲಿನೊಡನೆ ಹೆಣಗಲಿಕ್ಕಾದರೂ ಕಸುವು ಸಿಗಬೇಕು...
Comments
Post a Comment