ಕೆಲವರಿರುತ್ತಾರೆ. ನಮ್ಮ ಸುತ್ತಲೇ ಸುತ್ತುತ್ತಾ ನಾವು ಮಾಡಲು ಹೊರಡುವ ಕೆಲಸಗಳಲ್ಲೆಲ್ಲಾ ಹುಳುಕು ಹುಡುಕುತ್ತಾ, ಸಣ್ಣದಾಗಿ ವ್ಯಂಗ್ಯವಾಡುತ್ತಾ ನಮ್ಮ ಹುಮ್ಮಸ್ಸನ್ನೇ ಕಳೆದುಬಿಡುತ್ತಾರೆ.
ನನ್ನ ಸ್ನೇಹಿತನೊಬ್ಬನಿದ್ದ. ನಾನೇನು ಮಾಡಲು ಹೊರಟರೂ ಅಯ್ಯೋ ನಿಂಗೇನ್ ಹುಚ್ಚು ಮಾರಾಯಾ ಇಷ್ಟು ಬಂಡವಾಳ ಸುರಿದು ಇದನ್ನ್ಯಾಕೆ ಮಾಡೋಕೆ ಹೋದೆ !? ಇದು ನಮ್ಮಪ್ಪನಾಣೆ ಆಗುವಂತದ್ದಲ್ಲ ಬಿಡು ಬಿಡು... ಎಂದು ಅದೇನೋ ವ್ಯಂಗ್ಯವೋ, ವಿಕಾರವೋ ಆದ ಧಾಟಿಯಲ್ಲಿ ಶರಾ ಬರೆದುಬಿಡುತ್ತಿದ್ದ. ನಾನೋ ಸೋತು ಸುಣ್ಣವಾಗಿ ಏದುಸಿರು ಬಿಡುತ್ತಿದ್ದವನು, ಇವನ ಮಾತು ಕೇಳಿ ಒಳಗೇ ಮತ್ತೊಂದಷ್ಟು ಕುಸಿದು ಹೋಗುತ್ತಿದ್ದೆ. ಥತ್ ನಾನಿದನ್ನ ಮಾಡಬಾರದಿತ್ತಾ...? ಎಡವಿಬಿಟ್ಟೆನಾ...? ಎಂದೆಲ್ಲಾ ಯೋಚನೆಗೆ ಬೀಳುತ್ತಿದ್ದೆ. ನನ್ನ ಗ್ರಹಚಾರವೋ ಮತ್ತಿನ್ನೇನು ಸುಡುಗಾಡೋ ಮಾಡುತ್ತಿದ್ದ ಕೆಲಸಗಳೂ ಕಡೇ ಹಂತದಲ್ಲಿ ನೆಗೆದುಬೀಳುತ್ತಿದ್ದವು.
ಕಡೆ ಕಡೆಗೆ ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಅವನು ನೆಗೆಟಿವ್ ಒಪೀನಿಯನ್'ಗಳನ್ನು ಹೇರತೊಡಗಿದಾಗ ನನಗೆ ಉಸಿರುಗಟ್ಟತೊಡಗಿ ಒಂದು ದಿನ ಇಂಥದ್ದೇ ಯಾವುದೇ ವಿಚಾರದಲ್ಲಿ ಕಂಡಾಪಟ್ಟೆ ಜಗಳಾಡಿ ದೂರ ಸರಿಸಿಬಿಟ್ಟೆ. ಅದೇನೋ ಅವತ್ತಿನಿಂದ ಬೆನ್ನು ಹತ್ತಿದ್ದ ಬೇತಾಳವನ್ನು ಕೆಳಗೆ ಜಾಡಿಸಿದಂತಹ ಹಗುರ ಭಾವ.!
ಇಂತಹ ಹತ್ತಾರು ಜನ ನಮ್ಮ ಸುತ್ತಲಿರುತ್ತಾರೆ ಇಂಥವರನ್ನು ಸಾಧ್ಯವಾದಷ್ಟು ಕೊಡವಿ ದೂರವಿಡುವುದು ನಮ್ಮ ಮನಸ್ಸಿನ ಆರೋಗ್ಯಕ್ಕೆ ತುಂಬಾ ಅಗತ್ಯ.
ನಾವೂ ಕೂಡಾ ಅಷ್ಟೆ, ನಮ್ಮವರ ಕೆಲಸಗಳಲ್ಲಿ ಸುಖಾಸುಮ್ಮನೆ ತಲೆ ತೂರಿಸದೇ, ಕಾಲೆಳೆಯದೇ, ಅವರ ರೆಟ್ಟೆಯ ಕಸುವನ್ನು ಕಮ್ಮಿ ಮಾಡದೇ ನಮ್ಮ ಪಾಡಿಗಿರುವುದೂ ಕೂಡಾ ನಾವವರಿಗೆ ಮಾಡುವ ಸಹಾಯಗಳಲ್ಲೊಂದು. ಸಾಧ್ಯವಾದರೆ ಅವರ ಕಷ್ಟಗಳಿಗೆ ಹೆಗಲು ಕೊಟ್ಟು ಆಗದಿದ್ದರೆ ತೆಪ್ಪಗಿದ್ದುಬಿಟ್ಟರೆ ನಮ್ಮ ತೂಕವೂ ಹೆಚ್ಚುತ್ತದೆ.
ಸೋಲಿನ ನೋವು ಸೋತವರಿಗಷ್ಟೇ ಗೊತ್ತಿರುತ್ತದೆ.
Comments
Post a Comment