ಶಿವಮೊಗ್ಗ ಬಿಟ್ಟಾಗ ಏಳೂವರೆ. ಒಂದು ಗಂಟೆಯಲ್ಲಿ ನಾನು ಕಡೂರು ತಲುಪಬೇಕಿತ್ತು. ಒಂದಷ್ಟು ಮೆಟೀರಿಯಲ್ಲುಗಳನ್ನು ತುರ್ತಾಗಿ ಫಾರ್ಮ್ ಗೆ ತಲುಪಿಸಬೇಕಿತ್ತು. ಕಾರಿನ ಸ್ಪೀಡನ್ನು ಎಂಬತ್ತು - ನೂರರ ಮಧ್ಯದಲ್ಲಿರಿಸಿಕೊಂಡು ಬಂದರೂ ಗುಂಡಿಬಿದ್ದ ರಸ್ತೆಯಲ್ಲಿ ಡ್ರೈವ್ ಮಾಡುವುದು ನರಕ ಯಾತನೆ ಎನಿಸುತ್ತಿತ್ತು. ಅಂತೂ ಒಂಬತ್ತು ಗಂಟೆಗೆ ಫಾರ್ಮ್ ತಲುಪಿ ಮೆಟೀರಿಯಲ್ ಇಳಿಸಿ ಮನೆ ಕಡೆ ಹೊರಟೆ. ಮತ್ತೆ ನಲವತ್ತು ಕಿಮಿ ಡ್ರೈವ್ ಮಾಡಬೇಕು. ಬೆಳಗ್ಗೆಯಿಂದ ಬಿಡುವಿಲ್ಲದ ಕೆಲಸಗಳಿಂದಾಗಿ ಸಣ್ಣಗೆ ಜ್ವರ ಏರುತ್ತಿತ್ತು. ಮತ್ತೆ ಗಾಡಿಯ ವೇಗಕ್ಕೆ ತಿದಿಯೊತ್ತಿದೆ. ಚಿಕ್ಕಮಗಳೂರು ಇನ್ನೇನು ಹದಿನೈದು ಮೈಲಿ ದೂರವಿದೆ ಎನ್ನುವಷ್ಟರಲ್ಲಿ ತಿರುವೊಂದರಲ್ಲಿ ಘಕ್ಕನೇ ಬ್ರೇಕು ಒತ್ತಿದೆ. ಎದುರಿನಲ್ಲಿ ಟಾಟಾ ಏಸ್ ಒಂದು ಬೈಕ್ ಗೆ ಗುದ್ದಿ ಬೈಕಿನಲ್ಲಿದ್ದವರು ಕೆಳಗೆ ಬಿದ್ದಿದ್ದರು. ಅಪಘಾತವಾಗಿ ಹೆಚ್ಚೆಂದರೆ ಐದು ನಿಮಿಷವಾಗಿತ್ತೇನೋ... ತಕ್ಷಣ ಕಾರು ಇಳಿದು ಓಡಿ ಹೋಗಿ ಎತ್ತಿದೆ. ಬಹುಶಃ ಗಂಡ-ಹೆಂಡತಿ ಇರಬೇಕು... ತಲೆಯಿಂದ ರಕ್ತ ಸುರಿಯುತ್ತಿತ್ತು, ಕೈಕಾಲುಗಳು ಕಿತ್ತು ಹೋಗಿದ್ದವು. ಆಸ್ಪತ್ರೆಗಾದರೂ ತಲುಪಿಸೋಣ ಅಂದುಕೊಂಡು ಕರೆತಂದು ಕಾರಿನೊಳಗೆ ಕೂರಿಸಿದೆ.
ಕಾರು ಹೊರಟಮೇಲೆ ಸಣ್ಣಗೆ ನರಳತೊಡಗಿದರು. ಬಹುಶಃ ನೋವಿಗಿರಬಹುದು. ಕನ್ನಡಿ ನೋಡಿದೆ, ಆಕೆಯ ಕಣ್ಣು ಕತ್ತಲಿನಲ್ಲೂ ಕೆಂಪಗೆ ಹೊಳೆಯುತ್ತಿದ್ದವು. ಬಹುಶಃ ಭಯಕ್ಕೆ ಹಾಗಾಗಿರಬಹುದು ಎಂದುಕೊಂಡೆ.
ಇನ್ನೇನು ಎಐಟಿ ವೃತ್ತಕೆ ಎಂಟ್ರಿ ತೆಗೆದುಕೊಳ್ಳುವಷ್ಟರಲ್ಲಿ ಬದಿಯಲ್ಲಿ ನಿಂತಿದ್ದ ಜೀಪಿಗೆ ಒರಗಿದ್ದ ಪೋಲಿಸ್ ಒಬ್ಬ ಕೈ ಅಡ್ಡ ಹಾಕಿದ.
' ಯಾಕ್ರೀ ಸೀಟ್ ಬೆಲ್ಟ್ ಹಾಕಿಲ್ಲ...?' ಅಂದ.
ನಾನು ಬೆವರೊರೆಸಿಕೊಳ್ಳುತ್ತಾ 'ಸಾರ್ ಆ್ಯಕ್ಸಿಡೆಂಟ್ ಆಗಿದೆ ಆಸ್ಪತ್ರೆಗೋಗ್ಬೇಕು...' ಅಂದೆ. ಹಿಂದಿನ ಸೀಟಿನತ್ತ ಒಮ್ಮೆ ಬಗ್ಗಿ ನೋಡಿ ಇನ್ನೊಮ್ಮೆ ನನ್ನ ಬಾಯಿಯ ಸಮೀಪ ಬಂದು ವಾಸನೆ ನೋಡಿ, 'ಕುಡ್ದಿಲ್ಲಾ ತಾನೇ... ? ಯಾಕೆ ಏನೇನೋ ಮಾತಾಡ್ತಿದೀರಾ..? ಬೇಗ ಮನೆ ಸೇರ್ಕಳಿ.' ಅಂತಾ ಜೋರ್ ಮಾಡಿದ.
ಕನ್ನಡಿಯಲ್ಲಿ ನೋಡಿದಾಗ ಹಿಂದಿನ ಸೀಟು ಖಾಲಿಯಿರುವಂತೆನಿಸಿತು. ತಕ್ಷಣ ತಿರುಗಿ ನೋಡಿದೆ.
ಸೀಟಿನ ಮೇಲೆ ಒಂದಷ್ಟು ಮೆಟೀರಿಯಲ್ಲುಗಳ ಹಾಗೂ ಕುಶ್ವಂತ್ ಸಿಂಗ್ ರ ಪುಸ್ತಕ ಬೆಚ್ಚಗೆ ಪವಡಿಸಿದ್ದವು...!
Comments
Post a Comment