Skip to main content

ತೇಜಸ್ವಿ ಸಿಕ್ಕಿದ್ರು



ಪಿಯುಸಿಗೆ ಹೋಗುತ್ತಿದ್ದಾಗ ಪ್ರತಿದಿನ ಬಸ್ಸು ಇಳಿದ ತಕ್ಷಣ ನಮಗೊಂದಿಬ್ಬರಿಗೆ ಎರಡು ಅಭ್ಯಾಸಗಳಿದ್ದವು. ಮೊದಲನೆಯದ್ದು ಬಸ್ ಇಳಿದ ತಕ್ಷಣ ನೇರವಾಗಿ  ಬಸ್ ನಿಲ್ದಾಣದ ಎದುರಿಗಿರುವ ಪೋಸ್ಟ್ ಆಫೀಸಿಗೆ ಹೋಗಿ ಊರಿನಲ್ಲಿ ಅವರಿವರು ಕೊಟ್ಟ ಫೋನ್ ಬಿಲ್ಲುಗಳನ್ನು ಕಟ್ಟುವುದು, ಯಾವುದಾದರೂ ಪೋಸ್ಟ್ ಕವರ್ ಗಳಿದ್ದರೆ ಆಳೆತ್ತರದ ಡಬ್ಬಿಯೊಳಗೆ ಹಾಕಿ ಆ ಡಬ್ಬಿಯ ಬಾಯಿಯೊಳಕ್ಕೆ ಕೈ ತೂರಿಸಿ ಯಾವುದಾದರೂ ಕವರ್ ಗಳು ಸಿಗಬಹುದೇನೋ ಎಂದು ತಡಕಾಡುವ ಕಿತಾಪತಿ. ಅದು ಮುಗಿದಮೇಲೆ ಸೀದಾ ಸಾರ್ವಜನಿಕ ಲೈಬ್ರರಿಗೆ ಹೋಗಿ ಎತ್ತರದ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟ ಕನ್ನಡ ಪತ್ರಿಕೆಗಳನ್ನು ಓದಲು ಮೊದಲೇ ಬಂದು ಓದುತ್ತಿದ್ದ ಹುಡುಗರನ್ನು ಬದಿಗೆ ತಳ್ಳುತ್ತಾ ಸಂಧಿಯಲ್ಲಿ ತಲೆ ತೂರಿಸುತ್ತಾ ಓದಲು ಪ್ರಯತ್ನಿಸುವುದು. ಅಲ್ಲಿ ಜಾಗ ಸಿಗದಿದ್ದರೆ ಬಲಬದಿಯಲ್ಲಿ ಜೋಡಿಸಿಟ್ಟಿರುತ್ತಿದ್ದ  ಖಾಲಿ ಹೊಡೆಯುತ್ತಿದ್ದ ಇಂಗ್ಲೀಷ್ ಪೇಪರಿನ ಸಾಲಿನ ಮೇಜಿನ ಮೇಲೆ ತಲೆಯಿಟ್ಟು ಪತ್ರಿಕೆ ತಿರುವಿ ಹಾಕುತ್ತಾ ಚಿತ್ರಗಳನ್ನು ನೋಡುವುದು.

ಹೀಗೆ ಪೋಸ್ಟ್ ಆಫೀಸಿಗೆ ಹೋಗುವಾಗಲೆಲ್ಲಾ( ವಾರದಲ್ಲಿ ಎರಡು ಮೂರು ಸಲ) ಬಿಳೀ ಗಡ್ಡದಾರಿ ವ್ಯಕ್ತಿಯೊಬ್ಬರು ದೊಡ್ಡ ಕನ್ನಡಕ ಹಾಕಿಕೊಂಡು ಪೋಸ್ಟ್ ಆಫೀಸಿನ ಒಳಕ್ಕೊ ಅಥವಾ ಅಲ್ಲಿಂದ ಹೊರಕ್ಕೋ ಹೋಗುತ್ತಿದ್ದರು. ಕೆಲವೊಮ್ಮೆ ನಾವು ಗೇಟಿನೊಳಗೆ ಆಡಿಯಿಡುವಾಗ ಆ ವ್ಯಕ್ತಿ ಮೆಟ್ಟಿಲಿಳಿದು ಸಿಂಗಲ್ ಸೀಟಿನ ಸ್ಕೂಟರ್ ಹತ್ತಿ ಹೋಗುತ್ತಿದ್ದರು. ನಮಗೆ ಆ ವ್ಯಕ್ತಿಯ ಸ್ಕೂಟರಿನ ಕುರಿತು ಕುತೂಹಲ. ಸಿಂಗಲ್ ಸೀಟಿನ ಸ್ಕೂಟರಿನಲ್ಲಿ ಹಿಂದೆ ಹೇಗೆ ಕುರಿಸಿಕೊಂಡು ಹೋಗುತ್ತಾರೆ ಮತ್ತು ಹೋಗಬಹುದು ಎಂದು ಒಂದಷ್ಟು ಹೊತ್ತು ಚರ್ಚಿಸುತ್ತಿದ್ದೆವು. ಅಷ್ಟೇ ಹೊರತು ಆ ವ್ಯಕ್ತಿಯ ಬಗ್ಗೆ ನಮಗೇನೂ ಕುತೂಹಲವಿರಲಿಲ್ಲ ಬದಲಾಗಿ ಅವರ ಗಡ್ಡ ಮತ್ತು ಕನ್ನಡಕದ ಕುರಿತು ಸೋಜಿಗ. ಕಾರಣ ಆ ರೀತಿ ಗಡ್ಡ ಬಿಟ್ಟವರು ಬೇರೆ ಯಾರೂ ಮೂಡಿಗೆರೆಯಲ್ಲಿ ಕಣ್ಣಿಗೆ ಬಿದ್ದಿರಲಿಲ್ಲ.
ಒಂದು ದಿನ ಬೇಕರಿಯ ಬಳಿ ಏನೋ ತಿನ್ನುತ್ತಾ ನಿಂತಿದ್ದಾಗ ಅದೇ ವ್ಯಕ್ತಿ ಅಂಗಡಿಯ ಬದಿಯಲ್ಲಿ ಪೇಪರ್, ಮ್ಯಾಗಜೀನ್ ಮಾರುವ ಸಾಬರ ಕೈಲಿ ಮ್ಯಾಗಜೀನ್ ಖರೀದಿಸುತ್ತಿದ್ದರು. ಅವರತ್ತ ಹೋದ ಕೂಡಲೇ ' ಇದ್ಯಾರ್ ಮಾರಾಯಾ ವಿಚಿತ್ರವಾಗಿದಾರಲಾ...!' ನಾನು ಜೊತೆಗಿದ್ದವನಿಗಂದೆ. ಅವ್ರು ತೇಜಸ್ವಿ, ಕುವೆಂಪು ಅವ್ರ ಮಗ. ಅವ್ರ ಪುಸ್ತಕ ಓದಿಲ್ವೇನ್ರಾ... ಮ್ಯಾಗಜೀನ್ ಮಾರುವ ಸಾಬರೆಂದರು. ಪಠ್ಯವಾಗಿದ್ದ ' ಸುಸ್ಮಿತಾ ಹಾಗೂ ಹಕ್ಕಿಮರಿ' ಓದಿದ್ದೆವು. ಅದು ಬಿಟ್ಟು ಮತ್ತೇನನ್ನೂ ಓದಿರಲಿಲ್ಲ.
ಲೈಬ್ರರಿಯಲ್ಲಿ ಓದುತ್ತಿದ್ದುದು ಸುಧಾ, ಮಂಗಳ, ತರಂಗ. ಮನೆಗೆ ಬಂದರೆ ಮನೆಯೆದುರಿದ್ದ ಪುಟ್ಟ ಲೈಬ್ರರಿಯಲ್ಲಿ ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ, ಅನಾಕೃ.... ತೇಜಸ್ವಿಯೆಲ್ಲೂ ಸಿಗಲೇ ಇಲ್ಲ, ನಾನು ಹುಡುಕುತ್ತಲೂ ಇರಲಿಲ್ಲ.
ಮುಖ್ಯವಾಗಿ ತೇಜಸ್ವಿ ಮೂಡಿಗೆರೆಯ ಯಾವ ಸಭೆ ಸಮಾರಂಭಗಳಲ್ಲೂ ವೇದಿಕೆ ಅಲಂಕರಿಸುತ್ತಿರಲಿಲ್ಲ. ಬಹುಮುಖ್ಯವಾಗಿ ಅಡ್ಯಾಂತಾಯ ರಂಗ ಮಂದಿರದಲ್ಲಿ ನಡೆಯುತ್ತಿದ್ದ ಬಹುತೇಕ ಕಾರ್ಯಕ್ರಮಗಳ ಹಿಂದಿನ ಸಾಲಿನ ಖುರ್ಚಿಗಳನ್ನು ನಾವು ಅಲಂಕರಿಸುತ್ತಿದ್ದುದರಿಂದ  ಅಲ್ಲಿ ವೇದಿಕೆಯಲ್ಲಿರುತ್ತಿದ್ದ ಗಣ್ಯರಲ್ಲಿ ಎಂದೂ ತೇಜಸ್ವಿ ಕಾಣಿಸುತ್ತಿರಲಿಲ್ಲವಾದ್ದರಿಂದ ತೇಜಸ್ವಿಯೇನೂ ಅಂಥಾ ದೊಡ್ಡ ಜನವಲ್ಲ ಎಂಬ ಭಾವನೆ ನಮ್ಮದು.
ಅದಾದ ನಂತರ ಕೆಲವೊಮ್ಮೆ ಯಾವುದಾದರೂ ಮದುವೆಗಳಲ್ಲಿ, ಸುಗ್ಗಿಹಬ್ಬದ ಬನದಲ್ಲಿ ದೊಡ್ಡವರ( ವಯಸ್ಸಿನಲ್ಲಿ)  ಗುಂಪಿನೊಳಗೆ ನಿಂತಾಗ ತೇಜಸ್ವಿಯ ಮಾತು ಬರುತ್ತಿತ್ತು. ಕುವೆಂಪು ಮಗ ಅಂತೆ ಮಾರಾಯಾ ಅವ್ನಿಗ್ ತಲಿ ಸರಿ ಇಲ್ಲ ಅಂತ ಕಾಣ್ತದೆ ಒಬ್ನೇ ಮೀನ್ ಹಿಡಿತ ದಬ್ಲಲ್ಲಿ ಫೋಟ ತಗಿತ ಕೂತಿರ್ತನೆ ನಾನೆ ಸುಮಾರ್ ಸಲ ನೋಡಿನಿ. - "ನಾನೇ ನೋಡಿನಿ" ಎಂಬುದನ್ನು ಸುಳ್ಳೇ ಸೇರಿಸಿಕೊಂಡು ಹೇಳುತ್ತಿದ್ದರು ಕೆಲವರು. ಅವತ್ತಿಗೆ ಹಾಗೆ ಮಾತಾಡುತ್ತಿದ್ದವರೇ ತ್ರಿಲೋಕ ಜ್ಞಾನಿಗಳೆನ್ನಿಸಿ ತೇಜಸ್ವಿ ಅಂದರೆ ಯಾರೊ ಮಾಡಲು ಕೆಲಸವಿಲ್ಲದೇ ಮೀನು ಹಿಡಿಯುತ್ತಾ ಕಾಲ ಹಾಕುವವನು ಎನ್ನುವ ಪುಟ್ಟ ಉದಾಸೀನವೊಂದು ಮೂಲೆಯಲ್ಲೆಲ್ಲೋ ಬೆಳೆದುಕೊಂಡು ಬಿದ್ದಿತ್ತು.

ಬೆಂಗಳೂರಿನಲ್ಲೊಂದು ಪುಟ್ಟ ಘಟನೆ ನಡೆಯುವವರೆಗೂ...
ಮೂಡಿಗೆರೆ ಬಿಟ್ಟು ಬೆಂಗಳೂರು ಸೇರಿಕೊಂಡಮೇಲೆ ಓದುವುದೂ ತೀರಾ ಕಮ್ಮಿಯಾಗಿಹೋಯಿತು. ಒಂದು ಸಂಜೆ ರೂಮಿಗೆ ಹೋಗಲು ಮೆಜೆಸ್ಟಿಕ್ಕಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಪಕ್ಕದಲ್ಲಿ ಥರ ವಯಸ್ಕರೊಬ್ಬರು 'ಯಾವೂರು...?' ಅಂದರು. 'ಮೂಡ್ಗೆರೆ' ಅಂದೆ. ಹೋ ತೇಜಸ್ವಿಯವರೂರು. ಕರ್ವಾಲೋ ಮಂದಣ್ಣ ನ ಎಲ್ಲಿಯಾದ್ರೂ ನೋಡಿದೀಯಾ ? ಬಿರ್ಯಾನಿ ಕರಿಯಪ್ಪ ಇದಾನಾ ? ಅಂತೆಲ್ಲಾ ಕೇಳಲು ಶುರುಮಾಡಿದರು. ನನಗೆ ಗಡಿಬಿಡಿಯಾಯ್ತು.
ತೋಟಕ್ಕೆ ಕಸಿಗೆ ಬರುತ್ತಿದ್ದ ಘಟ್ಟದ ಕರಿಯಪ್ಪನನ್ನು ಬಿಟ್ಟರೆ ನನಗೆ ಉಳಿದವರ್ಯಾರೂ ಗೊತ್ತಿರಲಿಲ್ಲ. ಇವರೆಲ್ಲಾ ಯಾರು!? ಇವರೂ ಕತೆಗಿತೆ ಏನಾದರೂ ಬರೀತಾರಾ ? ಎಂದು ಯೋಚಿಸತೊಡಗಿದೆ.
ಮತ್ತೆ ಇಲ್ಯಾರೋ ಇಷ್ಟು ದೂರದ ಬೆಂಗಳೂರಿನವರು ತೇಜಸ್ವಿಯನ್ನು ಕೇಳುತ್ತಿದ್ದಾರೆ! ತೇಜಸ್ವಿ ಅಷ್ಟು ದೊಡ್ಡ ಆಳಾ...!?
ಅವ್ರ ಎಲ್ಲಾ ಪುಸ್ತಕಾನೂ ಓದಿದೀರಾ...?  ಮತ್ತೆ ಕೇಳಿದರು. ನನಗೋ ತೇಜಸ್ವಿ ಬರೆದ ಪುಸ್ತಕಗಳೆಷ್ಟು ಎಂದೇ ಗೊತ್ತಿರಲಿಲ್ಲ.! ಅವರದ್ದೊಂದು ಪಾಠವಿತ್ತು ಅಂದೆ. ಬಹುಶಃ ಹಾಗಿದ್ರೆ ಯಾವ್ದನ್ನೂ ಓದಿಲ್ಲ ಅಂತಾಯ್ತು ಏನ್ ಹುಡುಗ್ರೋ ಥೋ... ಎನ್ನುತ್ತಾ ಎದ್ದು ಹೋಗಿ ಬಸ್ ಹತ್ತಿದರು. ಅವಮಾನವಾದಂತಾಯ್ತು. ಕಾರಣ ನಾನೇನೂ ಪುಸ್ತಕ ಓದದವನಲ್ಲ. ಅವತ್ತಿಗೆ ನೂರಾರು ಪುಸ್ತಕಗಳನ್ನು ಓದಿದ್ದೆ. ಅನಾಕೃ ಅವರ ಬಹ ಪುಸ್ತಕಗಳನ್ನು, ರಾಮಾಯಣ ದರ್ಶನಂ, ಮಲೆನಾಡಿನ ಚಿತ್ರಗಳು, ಮಲೆಗಳಲ್ಲಿ ಮದುಮಗಳು ಎಲ್ಲವನ್ನೂ ಓದಿದ್ದೆ. ಇವುಗಳ ನಡುವೆ ಈ ತೇಜಸ್ವಿ ಎಲ್ಲಿ ತಪ್ಪಿ ಹೋದರು...!?

ಅದಾಗಿ ಒಂದೆರಡು ವಾರಕ್ಕೆ ತೇಜಸ್ವಿ ತೀರಿಕೊಂಡರು. ಆಗಿನ ಈಟಿವಿಯಲ್ಲಿ ದಿನವಿಡೀ ಅದೇ ಸುದ್ದಿ ಪ್ರಸಾರವಾಗುತ್ತಿತ್ತು. ನೋಡಿದರೆ ಮೂಡಿಗೆರೆ ಪೇಟೆಯುದ್ದಕ್ಕೂ ಜನಜಾತ್ರೆ.! ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು. ಇಷ್ಟೊಂದು ಜನ ಸೇರಿದ್ದಾರೆಂದರೆ ತೇಜಸ್ವಿ ಏನೋ ದೊಡ್ಡದನ್ನೇ ಬರೆದಿರಬೇಕು...! ಮೊದಲ ಬಾರಿಗೆ ಅನ್ನಿಸಿತು. ( ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲಿ ವ್ಯಕ್ತಿಯೊಬ್ಬರ ಅಂತಿಮಯಾತ್ರೆಗೆ ಜನಜಾತ್ರೆ ಸೇರಿದ್ದು ಎರಡೇ ಬಾರಿ. ಮೊದಲನೆಯವರು ತೇಜಸ್ವಿ ಎರಡನೆಯವರು ಸಿದ್ದಾರ್ಥ)
ಬೆಂಗಳೂರು ಬಿಟ್ಟು ಬಂದವನು ತೇಜಸ್ವಿಯ ಪುಸ್ತಕಗಳನ್ನು ತಂದು ಓದತೊಡಗಿದೆ. ನಾನು ಓದಿದ ಮೊದಲ ಪುಸ್ತಕ ಅಬಚೂರಿನ ಪೋಸ್ಟಾಫೀಸು. ಒಂದು ಕಾಲದಲ್ಲಿ ಆಗಾಗ ಪೋಸ್ಟಾಫಿಸಿನಲ್ಲಿ ಎದುರಾಗುತ್ತಿದ್ದ ವ್ಯಕ್ತಿಯ ಪೋಸ್ಟಾಫೀಸಿನ ಕಥೆಯನ್ನೇ ಮೊದಲು ಓದಿದ್ದು ಕಾಕತಾಳೀಯ.!
ಅವತ್ತು ಕುವೆಂಪು ಮಗನಂತೆ ತಲೆ ಸರಿ ಇಲ್ಲಂತೆ ಒಬ್ಬನೇ ಮೀನು ಹಿಡಿತಾ ಕೂರ್ತಾನಂತೆ ಕಾಡು ಅಲೀತಾನಂತೆ ಎಂದು ಮಾತಾಡಿ ನನ್ನಲ್ಲಿ ತೇಜಸ್ವಿಯವರ ಬಗೆಗೆ ಉದಾಸೀನವೊಂದು ಮೊಳೆಯುವಂತೆ ಮಾಡಿದವರನ್ನು ಈಗ ಹುಡುಕಿ ಹೊಡೆಯಬೇಕೆನ್ನಿಸುತ್ತದೆ. ಕಾರಣ ಆ ಹುಚ್ಚುಗಳೆಲ್ಲಾ ಈಗ ನನಗೆ ಬಂದಿವೆ.! ಈಗ ಅವರ ಮನೆಗೆ ಹೋದಾಗಲೆಲ್ಲಾ ಅವರಿದ್ದಾಗ ಬರಬೇಕಿತ್ತು ಅನಿಸುತ್ತದೆ.
ಇವತ್ತಿಗೆ ಅವರು ನಮ್ಮನ್ನಗಲಿ ಹದಿಮೂರು ವರ್ಷ.

Comments

Post a Comment

Popular posts from this blog

 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...