ಪಿಯುಸಿಗೆ ಹೋಗುತ್ತಿದ್ದಾಗ ಪ್ರತಿದಿನ ಬಸ್ಸು ಇಳಿದ ತಕ್ಷಣ ನಮಗೊಂದಿಬ್ಬರಿಗೆ ಎರಡು ಅಭ್ಯಾಸಗಳಿದ್ದವು. ಮೊದಲನೆಯದ್ದು ಬಸ್ ಇಳಿದ ತಕ್ಷಣ ನೇರವಾಗಿ ಬಸ್ ನಿಲ್ದಾಣದ ಎದುರಿಗಿರುವ ಪೋಸ್ಟ್ ಆಫೀಸಿಗೆ ಹೋಗಿ ಊರಿನಲ್ಲಿ ಅವರಿವರು ಕೊಟ್ಟ ಫೋನ್ ಬಿಲ್ಲುಗಳನ್ನು ಕಟ್ಟುವುದು, ಯಾವುದಾದರೂ ಪೋಸ್ಟ್ ಕವರ್ ಗಳಿದ್ದರೆ ಆಳೆತ್ತರದ ಡಬ್ಬಿಯೊಳಗೆ ಹಾಕಿ ಆ ಡಬ್ಬಿಯ ಬಾಯಿಯೊಳಕ್ಕೆ ಕೈ ತೂರಿಸಿ ಯಾವುದಾದರೂ ಕವರ್ ಗಳು ಸಿಗಬಹುದೇನೋ ಎಂದು ತಡಕಾಡುವ ಕಿತಾಪತಿ. ಅದು ಮುಗಿದಮೇಲೆ ಸೀದಾ ಸಾರ್ವಜನಿಕ ಲೈಬ್ರರಿಗೆ ಹೋಗಿ ಎತ್ತರದ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟ ಕನ್ನಡ ಪತ್ರಿಕೆಗಳನ್ನು ಓದಲು ಮೊದಲೇ ಬಂದು ಓದುತ್ತಿದ್ದ ಹುಡುಗರನ್ನು ಬದಿಗೆ ತಳ್ಳುತ್ತಾ ಸಂಧಿಯಲ್ಲಿ ತಲೆ ತೂರಿಸುತ್ತಾ ಓದಲು ಪ್ರಯತ್ನಿಸುವುದು. ಅಲ್ಲಿ ಜಾಗ ಸಿಗದಿದ್ದರೆ ಬಲಬದಿಯಲ್ಲಿ ಜೋಡಿಸಿಟ್ಟಿರುತ್ತಿದ್ದ ಖಾಲಿ ಹೊಡೆಯುತ್ತಿದ್ದ ಇಂಗ್ಲೀಷ್ ಪೇಪರಿನ ಸಾಲಿನ ಮೇಜಿನ ಮೇಲೆ ತಲೆಯಿಟ್ಟು ಪತ್ರಿಕೆ ತಿರುವಿ ಹಾಕುತ್ತಾ ಚಿತ್ರಗಳನ್ನು ನೋಡುವುದು.
ಹೀಗೆ ಪೋಸ್ಟ್ ಆಫೀಸಿಗೆ ಹೋಗುವಾಗಲೆಲ್ಲಾ( ವಾರದಲ್ಲಿ ಎರಡು ಮೂರು ಸಲ) ಬಿಳೀ ಗಡ್ಡದಾರಿ ವ್ಯಕ್ತಿಯೊಬ್ಬರು ದೊಡ್ಡ ಕನ್ನಡಕ ಹಾಕಿಕೊಂಡು ಪೋಸ್ಟ್ ಆಫೀಸಿನ ಒಳಕ್ಕೊ ಅಥವಾ ಅಲ್ಲಿಂದ ಹೊರಕ್ಕೋ ಹೋಗುತ್ತಿದ್ದರು. ಕೆಲವೊಮ್ಮೆ ನಾವು ಗೇಟಿನೊಳಗೆ ಆಡಿಯಿಡುವಾಗ ಆ ವ್ಯಕ್ತಿ ಮೆಟ್ಟಿಲಿಳಿದು ಸಿಂಗಲ್ ಸೀಟಿನ ಸ್ಕೂಟರ್ ಹತ್ತಿ ಹೋಗುತ್ತಿದ್ದರು. ನಮಗೆ ಆ ವ್ಯಕ್ತಿಯ ಸ್ಕೂಟರಿನ ಕುರಿತು ಕುತೂಹಲ. ಸಿಂಗಲ್ ಸೀಟಿನ ಸ್ಕೂಟರಿನಲ್ಲಿ ಹಿಂದೆ ಹೇಗೆ ಕುರಿಸಿಕೊಂಡು ಹೋಗುತ್ತಾರೆ ಮತ್ತು ಹೋಗಬಹುದು ಎಂದು ಒಂದಷ್ಟು ಹೊತ್ತು ಚರ್ಚಿಸುತ್ತಿದ್ದೆವು. ಅಷ್ಟೇ ಹೊರತು ಆ ವ್ಯಕ್ತಿಯ ಬಗ್ಗೆ ನಮಗೇನೂ ಕುತೂಹಲವಿರಲಿಲ್ಲ ಬದಲಾಗಿ ಅವರ ಗಡ್ಡ ಮತ್ತು ಕನ್ನಡಕದ ಕುರಿತು ಸೋಜಿಗ. ಕಾರಣ ಆ ರೀತಿ ಗಡ್ಡ ಬಿಟ್ಟವರು ಬೇರೆ ಯಾರೂ ಮೂಡಿಗೆರೆಯಲ್ಲಿ ಕಣ್ಣಿಗೆ ಬಿದ್ದಿರಲಿಲ್ಲ.
ಒಂದು ದಿನ ಬೇಕರಿಯ ಬಳಿ ಏನೋ ತಿನ್ನುತ್ತಾ ನಿಂತಿದ್ದಾಗ ಅದೇ ವ್ಯಕ್ತಿ ಅಂಗಡಿಯ ಬದಿಯಲ್ಲಿ ಪೇಪರ್, ಮ್ಯಾಗಜೀನ್ ಮಾರುವ ಸಾಬರ ಕೈಲಿ ಮ್ಯಾಗಜೀನ್ ಖರೀದಿಸುತ್ತಿದ್ದರು. ಅವರತ್ತ ಹೋದ ಕೂಡಲೇ ' ಇದ್ಯಾರ್ ಮಾರಾಯಾ ವಿಚಿತ್ರವಾಗಿದಾರಲಾ...!' ನಾನು ಜೊತೆಗಿದ್ದವನಿಗಂದೆ. ಅವ್ರು ತೇಜಸ್ವಿ, ಕುವೆಂಪು ಅವ್ರ ಮಗ. ಅವ್ರ ಪುಸ್ತಕ ಓದಿಲ್ವೇನ್ರಾ... ಮ್ಯಾಗಜೀನ್ ಮಾರುವ ಸಾಬರೆಂದರು. ಪಠ್ಯವಾಗಿದ್ದ ' ಸುಸ್ಮಿತಾ ಹಾಗೂ ಹಕ್ಕಿಮರಿ' ಓದಿದ್ದೆವು. ಅದು ಬಿಟ್ಟು ಮತ್ತೇನನ್ನೂ ಓದಿರಲಿಲ್ಲ.
ಲೈಬ್ರರಿಯಲ್ಲಿ ಓದುತ್ತಿದ್ದುದು ಸುಧಾ, ಮಂಗಳ, ತರಂಗ. ಮನೆಗೆ ಬಂದರೆ ಮನೆಯೆದುರಿದ್ದ ಪುಟ್ಟ ಲೈಬ್ರರಿಯಲ್ಲಿ ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ, ಅನಾಕೃ.... ತೇಜಸ್ವಿಯೆಲ್ಲೂ ಸಿಗಲೇ ಇಲ್ಲ, ನಾನು ಹುಡುಕುತ್ತಲೂ ಇರಲಿಲ್ಲ.
ಮುಖ್ಯವಾಗಿ ತೇಜಸ್ವಿ ಮೂಡಿಗೆರೆಯ ಯಾವ ಸಭೆ ಸಮಾರಂಭಗಳಲ್ಲೂ ವೇದಿಕೆ ಅಲಂಕರಿಸುತ್ತಿರಲಿಲ್ಲ. ಬಹುಮುಖ್ಯವಾಗಿ ಅಡ್ಯಾಂತಾಯ ರಂಗ ಮಂದಿರದಲ್ಲಿ ನಡೆಯುತ್ತಿದ್ದ ಬಹುತೇಕ ಕಾರ್ಯಕ್ರಮಗಳ ಹಿಂದಿನ ಸಾಲಿನ ಖುರ್ಚಿಗಳನ್ನು ನಾವು ಅಲಂಕರಿಸುತ್ತಿದ್ದುದರಿಂದ ಅಲ್ಲಿ ವೇದಿಕೆಯಲ್ಲಿರುತ್ತಿದ್ದ ಗಣ್ಯರಲ್ಲಿ ಎಂದೂ ತೇಜಸ್ವಿ ಕಾಣಿಸುತ್ತಿರಲಿಲ್ಲವಾದ್ದರಿಂದ ತೇಜಸ್ವಿಯೇನೂ ಅಂಥಾ ದೊಡ್ಡ ಜನವಲ್ಲ ಎಂಬ ಭಾವನೆ ನಮ್ಮದು.
ಅದಾದ ನಂತರ ಕೆಲವೊಮ್ಮೆ ಯಾವುದಾದರೂ ಮದುವೆಗಳಲ್ಲಿ, ಸುಗ್ಗಿಹಬ್ಬದ ಬನದಲ್ಲಿ ದೊಡ್ಡವರ( ವಯಸ್ಸಿನಲ್ಲಿ) ಗುಂಪಿನೊಳಗೆ ನಿಂತಾಗ ತೇಜಸ್ವಿಯ ಮಾತು ಬರುತ್ತಿತ್ತು. ಕುವೆಂಪು ಮಗ ಅಂತೆ ಮಾರಾಯಾ ಅವ್ನಿಗ್ ತಲಿ ಸರಿ ಇಲ್ಲ ಅಂತ ಕಾಣ್ತದೆ ಒಬ್ನೇ ಮೀನ್ ಹಿಡಿತ ದಬ್ಲಲ್ಲಿ ಫೋಟ ತಗಿತ ಕೂತಿರ್ತನೆ ನಾನೆ ಸುಮಾರ್ ಸಲ ನೋಡಿನಿ. - "ನಾನೇ ನೋಡಿನಿ" ಎಂಬುದನ್ನು ಸುಳ್ಳೇ ಸೇರಿಸಿಕೊಂಡು ಹೇಳುತ್ತಿದ್ದರು ಕೆಲವರು. ಅವತ್ತಿಗೆ ಹಾಗೆ ಮಾತಾಡುತ್ತಿದ್ದವರೇ ತ್ರಿಲೋಕ ಜ್ಞಾನಿಗಳೆನ್ನಿಸಿ ತೇಜಸ್ವಿ ಅಂದರೆ ಯಾರೊ ಮಾಡಲು ಕೆಲಸವಿಲ್ಲದೇ ಮೀನು ಹಿಡಿಯುತ್ತಾ ಕಾಲ ಹಾಕುವವನು ಎನ್ನುವ ಪುಟ್ಟ ಉದಾಸೀನವೊಂದು ಮೂಲೆಯಲ್ಲೆಲ್ಲೋ ಬೆಳೆದುಕೊಂಡು ಬಿದ್ದಿತ್ತು.
ಬೆಂಗಳೂರಿನಲ್ಲೊಂದು ಪುಟ್ಟ ಘಟನೆ ನಡೆಯುವವರೆಗೂ...
ಮೂಡಿಗೆರೆ ಬಿಟ್ಟು ಬೆಂಗಳೂರು ಸೇರಿಕೊಂಡಮೇಲೆ ಓದುವುದೂ ತೀರಾ ಕಮ್ಮಿಯಾಗಿಹೋಯಿತು. ಒಂದು ಸಂಜೆ ರೂಮಿಗೆ ಹೋಗಲು ಮೆಜೆಸ್ಟಿಕ್ಕಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ಪಕ್ಕದಲ್ಲಿ ಥರ ವಯಸ್ಕರೊಬ್ಬರು 'ಯಾವೂರು...?' ಅಂದರು. 'ಮೂಡ್ಗೆರೆ' ಅಂದೆ. ಹೋ ತೇಜಸ್ವಿಯವರೂರು. ಕರ್ವಾಲೋ ಮಂದಣ್ಣ ನ ಎಲ್ಲಿಯಾದ್ರೂ ನೋಡಿದೀಯಾ ? ಬಿರ್ಯಾನಿ ಕರಿಯಪ್ಪ ಇದಾನಾ ? ಅಂತೆಲ್ಲಾ ಕೇಳಲು ಶುರುಮಾಡಿದರು. ನನಗೆ ಗಡಿಬಿಡಿಯಾಯ್ತು.
ತೋಟಕ್ಕೆ ಕಸಿಗೆ ಬರುತ್ತಿದ್ದ ಘಟ್ಟದ ಕರಿಯಪ್ಪನನ್ನು ಬಿಟ್ಟರೆ ನನಗೆ ಉಳಿದವರ್ಯಾರೂ ಗೊತ್ತಿರಲಿಲ್ಲ. ಇವರೆಲ್ಲಾ ಯಾರು!? ಇವರೂ ಕತೆಗಿತೆ ಏನಾದರೂ ಬರೀತಾರಾ ? ಎಂದು ಯೋಚಿಸತೊಡಗಿದೆ.
ಮತ್ತೆ ಇಲ್ಯಾರೋ ಇಷ್ಟು ದೂರದ ಬೆಂಗಳೂರಿನವರು ತೇಜಸ್ವಿಯನ್ನು ಕೇಳುತ್ತಿದ್ದಾರೆ! ತೇಜಸ್ವಿ ಅಷ್ಟು ದೊಡ್ಡ ಆಳಾ...!?
ಅವ್ರ ಎಲ್ಲಾ ಪುಸ್ತಕಾನೂ ಓದಿದೀರಾ...? ಮತ್ತೆ ಕೇಳಿದರು. ನನಗೋ ತೇಜಸ್ವಿ ಬರೆದ ಪುಸ್ತಕಗಳೆಷ್ಟು ಎಂದೇ ಗೊತ್ತಿರಲಿಲ್ಲ.! ಅವರದ್ದೊಂದು ಪಾಠವಿತ್ತು ಅಂದೆ. ಬಹುಶಃ ಹಾಗಿದ್ರೆ ಯಾವ್ದನ್ನೂ ಓದಿಲ್ಲ ಅಂತಾಯ್ತು ಏನ್ ಹುಡುಗ್ರೋ ಥೋ... ಎನ್ನುತ್ತಾ ಎದ್ದು ಹೋಗಿ ಬಸ್ ಹತ್ತಿದರು. ಅವಮಾನವಾದಂತಾಯ್ತು. ಕಾರಣ ನಾನೇನೂ ಪುಸ್ತಕ ಓದದವನಲ್ಲ. ಅವತ್ತಿಗೆ ನೂರಾರು ಪುಸ್ತಕಗಳನ್ನು ಓದಿದ್ದೆ. ಅನಾಕೃ ಅವರ ಬಹ ಪುಸ್ತಕಗಳನ್ನು, ರಾಮಾಯಣ ದರ್ಶನಂ, ಮಲೆನಾಡಿನ ಚಿತ್ರಗಳು, ಮಲೆಗಳಲ್ಲಿ ಮದುಮಗಳು ಎಲ್ಲವನ್ನೂ ಓದಿದ್ದೆ. ಇವುಗಳ ನಡುವೆ ಈ ತೇಜಸ್ವಿ ಎಲ್ಲಿ ತಪ್ಪಿ ಹೋದರು...!?
ಅದಾಗಿ ಒಂದೆರಡು ವಾರಕ್ಕೆ ತೇಜಸ್ವಿ ತೀರಿಕೊಂಡರು. ಆಗಿನ ಈಟಿವಿಯಲ್ಲಿ ದಿನವಿಡೀ ಅದೇ ಸುದ್ದಿ ಪ್ರಸಾರವಾಗುತ್ತಿತ್ತು. ನೋಡಿದರೆ ಮೂಡಿಗೆರೆ ಪೇಟೆಯುದ್ದಕ್ಕೂ ಜನಜಾತ್ರೆ.! ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು. ಇಷ್ಟೊಂದು ಜನ ಸೇರಿದ್ದಾರೆಂದರೆ ತೇಜಸ್ವಿ ಏನೋ ದೊಡ್ಡದನ್ನೇ ಬರೆದಿರಬೇಕು...! ಮೊದಲ ಬಾರಿಗೆ ಅನ್ನಿಸಿತು. ( ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲಿ ವ್ಯಕ್ತಿಯೊಬ್ಬರ ಅಂತಿಮಯಾತ್ರೆಗೆ ಜನಜಾತ್ರೆ ಸೇರಿದ್ದು ಎರಡೇ ಬಾರಿ. ಮೊದಲನೆಯವರು ತೇಜಸ್ವಿ ಎರಡನೆಯವರು ಸಿದ್ದಾರ್ಥ)
ಬೆಂಗಳೂರು ಬಿಟ್ಟು ಬಂದವನು ತೇಜಸ್ವಿಯ ಪುಸ್ತಕಗಳನ್ನು ತಂದು ಓದತೊಡಗಿದೆ. ನಾನು ಓದಿದ ಮೊದಲ ಪುಸ್ತಕ ಅಬಚೂರಿನ ಪೋಸ್ಟಾಫೀಸು. ಒಂದು ಕಾಲದಲ್ಲಿ ಆಗಾಗ ಪೋಸ್ಟಾಫಿಸಿನಲ್ಲಿ ಎದುರಾಗುತ್ತಿದ್ದ ವ್ಯಕ್ತಿಯ ಪೋಸ್ಟಾಫೀಸಿನ ಕಥೆಯನ್ನೇ ಮೊದಲು ಓದಿದ್ದು ಕಾಕತಾಳೀಯ.!
ಅವತ್ತು ಕುವೆಂಪು ಮಗನಂತೆ ತಲೆ ಸರಿ ಇಲ್ಲಂತೆ ಒಬ್ಬನೇ ಮೀನು ಹಿಡಿತಾ ಕೂರ್ತಾನಂತೆ ಕಾಡು ಅಲೀತಾನಂತೆ ಎಂದು ಮಾತಾಡಿ ನನ್ನಲ್ಲಿ ತೇಜಸ್ವಿಯವರ ಬಗೆಗೆ ಉದಾಸೀನವೊಂದು ಮೊಳೆಯುವಂತೆ ಮಾಡಿದವರನ್ನು ಈಗ ಹುಡುಕಿ ಹೊಡೆಯಬೇಕೆನ್ನಿಸುತ್ತದೆ. ಕಾರಣ ಆ ಹುಚ್ಚುಗಳೆಲ್ಲಾ ಈಗ ನನಗೆ ಬಂದಿವೆ.! ಈಗ ಅವರ ಮನೆಗೆ ಹೋದಾಗಲೆಲ್ಲಾ ಅವರಿದ್ದಾಗ ಬರಬೇಕಿತ್ತು ಅನಿಸುತ್ತದೆ.
ಇವತ್ತಿಗೆ ಅವರು ನಮ್ಮನ್ನಗಲಿ ಹದಿಮೂರು ವರ್ಷ.
ಅದ್ಭುತ ಬರಹ...
ReplyDeleteಚಂದ ಬರಹ
ReplyDelete