ಈ ಮಳೆಗಾಲದಲ್ಲಿ ನಮ್ಮೂರಿನ ಗುಡ್ಡ ಕುಸಿದ ಜಾಗಗಳಲ್ಲಿ ಓಡಾಡುವಾಗ ಒಂದು ಕಡೆ ದೊಡ್ಡ ವಿಸ್ಮಯ ಎನಿಸುವಂಥದ್ದು ಕಂಡಿತು. ಕಾಫಿ ತೋಟದ ಪುಟ್ಟ ಕಣಿವೆಯೊಂದು ಗುಡ್ಡದ ಮಣ್ಣು , ನೀರು ಕೊಚ್ಚಿ ಬಂದ ಪರಿಣಾಮ ಐವತ್ತರವತ್ತು ಅಡಿ ಅಗಲದಷ್ಟು ದೊಡ್ಡ ಹೊಳೆಯಾಗಿ ಮಾರ್ಪಟ್ಟಿತ್ತು.! ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering! ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ. ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು. ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರ...