Skip to main content

 ಎರಡು ವರ್ಷಗಳ ಹಿಂದೆ ನಾವು ವಿರಾಜಪೇಟೆಯಿಂದ ಇರಿಟ್ಟಿ ಎನ್ನುವ ಕೇರಳದ ಗಡಿಭಾಗದ ಊರಿಗೆ ಹೋಗಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಎಲ್ಲಿ ನೋಡಿದರಲ್ಲಿ ಗುಡ್ಡ , ಕಾಡು ಕಡಿದು ಕಟ್ಟಡಗಳ ನಿರ್ಮಾಣ, ಗೆರೆ ಅಗೆದು ರಸ್ತೆ ಅಗಲೀಕರಣ, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಕಣಿವೆಗೆ ರಸ್ತೆ ವಿಸ್ತರಣೆಯ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಕಣಿವೆಯಾಚೆಗಿನ ಗುಡ್ಡವನ್ನು ಇನ್ಯಾವುದೋ ಕಾಮಗಾರಿಗಾಗಿ ಜೆಸಿಬಿಗಳು ಬಗೆಯುತ್ತಿದ್ದವು. ಇನ್ನೊಂದು ಬದಿಯಲ್ಲಿ ರಬ್ಬರ್ ತೋಟಗಳು. ನದಿಯ ಕಣಿವೆಯ ಅಂಚಿಗೇ ಮನೆಗಳು, ಅಂಗಡಿ-ಹೋಟೆಲುಗಳು. ಒಟ್ಟಾರೆಯಾಗಿ ಆ ಇಡೀ ಪರಿಸರ ಒಂದು ರೀತಿಯ ಕೃತಕ ನಿರ್ಮಾಣದ ಧಾವಂತಕ್ಕೆ ಬಿದ್ದಂತೆ ತೋರುತ್ತಿತ್ತು. 

ಕೇರಳದ ಆ ಊರು ಮನುಷ್ಯನ ಕೈಚಳಕಕ್ಕೆ ಸಿಕ್ಕಿ ಚಿತ್ರವಿಚಿತ್ರ ರೂಪ ಪಡೆಯುತ್ತಿರುವ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಗೋಚರವಾಗುತ್ತಿತ್ತು. 


ಇವತ್ತು ಮಾನವ ಕೇಂದ್ರಿತ ವ್ಯವಸ್ಥೆಯು ಪ್ರಕೃತಿಯ ಮೇಲೆ ಹೊಸ ಹೊಸಾ ಆವಿಷ್ಕಾರಗಳ ಪ್ರಯೋಗಗಳನ್ನು ಎಗ್ಗಿಲ್ಲದೇ ನಡೆಸುತ್ತಿದೆ. 

ಇದೊಂತರಾ ತಾಯಿಯ ಎದೆಯೊಳಗೆ ಕೃತಕ  ಹಾಲನ್ನು ಸಿರಿಂಜಿನ ಮೂಲಕ ಒಳಸೇರಿಸಲು ಪ್ರಯತ್ನಿಸಿದಂತೆ.! 


ಇದಕ್ಕೆ ಆಧುನಿಕ ವಿಜ್ಞಾನ ಎಂದು ಹೆಸರು.! 


ಇದರ ಹೆಸರಿನಲ್ಲಿಯೇ ಭೂ ರಚನೆಯ ವಿರುದ್ಧವಾಗಿ ರಸ್ತೆ, ಕೆನಲ್ ,  ಸುರಂಗ ಮಾರ್ಗ, ಅತಿ ಭಾರದ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ನಡೆಸಿ ನೀರಿನ ನೈಸರ್ಗಿಕ ಹರಿವಿನ ದಿಕ್ಕಿಗೆ ತಡೆ ಕಟ್ಟಲಾಗುತ್ತದೆ. 

ನಿರಂತರವಾಗಿ ರಾಸಾಯನಿಕ ಔಷಧಿಗಳನ್ನು ಕೃಷಿಗೆ ಸಿಂಪಡಿಸುವ ಮೂಲಕ ಮಣ್ಣಿನ ಮೇಲ್ಪದರದ ಶಕ್ತಿಯನ್ನು ಕೊಲ್ಲಲಾಗುತ್ತದೆ. 

ಎಲ್ಲೆಂದರಲ್ಲಿ ಕಾಡುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವ ಮೂಲಕ ಭೂ ಸವಕಳಿಗೆ ಅನುವು ಮಾಡಿಕೊಡಲಾಗುತ್ತದೆ. 

ನದಿ ಪಾತ್ರದಲ್ಲಿ, ನೀರಿನ ಒರತೆಯಿರುವ ಪ್ರದೇಶದಲ್ಲಿ, ಗದ್ದೆಯಂತಹ ಜೌಗು ಪ್ರದೇಶದಲ್ಲಿ ಲೇಯೌಟ್ ಸೃಷ್ಟಿಸಲಾಗುತ್ತದೆ. ಎತ್ತರದ ಇಳಿಜಾರಿನ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುತ್ತದೆ. 

ಇವೆಲ್ಲವೂ ಆಧುನಿಕ ನಾಗರಿಕ ವ್ಯವಸ್ಥೆಯ ಅವೈಜ್ನಾನಿಕ ರೆಂಬೆ-ಕೊಂಬೆಗಳು. 


ಇವೆಲ್ಲದರ ಒಟ್ಟು ಮೊತ್ತವನ್ನೇ ನಾವಿವತ್ತು ಪಶ್ಚಿಮಘಟ್ಟದ ಸೆರಗಿನಲ್ಲಿರುವವರು ಅನುಭವಿಸುತ್ತಿರುವುದು. 

ಅಸಲಿಗೆ ಪ್ರಕೃತಿಯೇ ಒಂದು ವಿಜ್ಞಾನ. ಅದರ ಮುಂದೆ ಮನುಷ್ಯ ನಿರ್ಮಿಸಿದ್ದೆಲ್ಲಾ ಆಟಿಕೆಗೆ ಸಮ. 

ಪ್ರಕೃತಿ ತನಗೆ ಬೇಕಾದಂತೆ ತನ್ನನ್ನು ರಚನೆ ಮಾಡಿಕೊಂಡಿದೆ‌. ಅದನ್ನು ಮನುಷ್ಯ ಮರುನಿರ್ಮಿಸುತ್ತೇನೆ ಮಾರ್ಪಡಿಸುತ್ತೇನೆ ಎನ್ನುವುದರಷ್ಟು ಮೂರ್ಖತನ ಮತ್ತೊಂದಿಲ್ಲ.! 

ನಾವು ನಿರ್ಮಾಣದ ಹೆಸರಿನಲ್ಲಿ ಪ್ರಾಕೃತಿಕ ಚಲನೆಯನ್ನು ವಿರೂಪಗೊಳಿಸುತ್ತಾ ಬಂದೆವು. ಪ್ರಕೃತಿ ತಾಳ್ಮೆಯ ತುತ್ತತುದಿ ತಲುಪಿದ ನಂತರ ಎಲ್ಲವನ್ನೂ ಕಿತ್ತೊಗೆಯುತ್ತಾ ಬಂತು. 


ಈ ನೆರೆ, ಪ್ರವಾಹಕ್ಕೆಲ್ಲಾ ನದಿ ತಿರುವು ಮಾಡುವುದೇ ಸೂಕ್ತ ಪರಿಹಾರ ಎಂದು ಮೊನ್ನೆ ಒಬ್ಬರು ಚರ್ಚಿಸುತ್ತಿದ್ದರು. ನನಗೆ ನಗುಬಂತು. ಸಮುದ್ರಕ್ಕೆ ಸೇರುವ ವ್ಯರ್ಥ ನೀರನ್ನು ತಿರುಗಿಸುತ್ತೇವೆ ಎನ್ನುವುದೇ ಪರಮ ಮೂರ್ಖತನ.! ನದಿಯ ನೀರು ಸಮುದ್ರವನ್ನು ಸೇರಲೇಬೇಕು ಅದೇ ನೈಸರ್ಗಿಕ ಸಮತೋಲನ ವ್ಯವಸ್ಥೆ. 

ನದಿ ಸಮುದ್ರ ಸೇರುವುದು ವ್ಯರ್ಥ ಎಂಬುದನ್ನು ಕಂಡುಹಿಡಿದವರು ಯಾರು !? 


ಪ್ರಕೃತಿ ಸಾಕುನಾಯಿಯಂತಹದ್ದು. ವಿಪರೀತ ತಾಳ್ಮೆ, ನಿಯತ್ತು. 

ನಾವು ಸಾಕಿದ ನಾಯಿಯನ್ನು ಕೆಡವಿಕೊಂಡು  ಕಿರುಕುಳ ಕೊಡಲು ಪ್ರಾರಂಭಿಸಿದರೆ ಅದು ಎಷ್ಟು ಹೊತ್ತು ಸಹಿಸೀತು... !? ಅರ್ಧ ಗಂಟೆ. ? ಒಂದು ಗಂಟೆ ? ಎರಡು ಗಂಟೆ ? ಆ ನಂತರವೂ ಕಿರುಕುಳ ಮುಂದುವರೆದರೆ ನಿಯತ್ತಿನ ನಾಯಿಯೂ ತಿರುಗಿ ಬಾಯಿ ಹಾಕೀತು.!

 ಪ್ರಕೃತಿ ಈಗ ತಿರುಗಿ ಬಿದ್ದಿರುವುದೂ ಹೀಗೆಯೇ...!


ಪಶ್ಚಿಮಘಟ್ಟದ ಸೆರಗು ಕಂಡು ಕೇಳರಿಯದ ಅವಘಡಕ್ಕೆ ಪದೇ ಪದೇ ತುತ್ತಾಗುತ್ತಿರುವುದಕ್ಕೆ ಇವೆಲ್ಲಾ ಚಟುವಟಿಕೆಗಳೇ ಕಾರಣ.

Comments

Post a Comment

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...