ಇತ್ತೀಚೆಗೆ ತಾರತಮ್ಯದ ಕುರಿತಾಗಿ ಒಂದು ಚರ್ಚೆ.
ಹಿಂದಿನ ಕಾಲದಲ್ಲಿ ಮೇಲ್ಜಾತಿಯವರು ಕೆಳಜಾತಿಯವರಿಗೆ ಕುರೂಪಿ ಹೆಸರುಗಳನ್ನಿಡುತ್ತಿದ್ದರು ಎಂಬುದು ಚರ್ಚೆಯ ವಸ್ತು.
ಬ್ರಾಹ್ಮಣರು ತಮ್ಮ ಮಕ್ಕಳಿಗಾದರೆ ಶ್ಯಾಮ, ವಿನಾಯಕ, ಗಣೇಶ, ರಾಘವೇಂದ್ರ, ಮಂಜುನಾಥ ಎಂದೆಲ್ಲಾ ಚೆಂದದ ಹೆಸರಿಟ್ಟು, ತಮ್ಮಲ್ಲಿಗೆ ನಾಮಕರಣದ ಮನವಿ ಹೊತ್ತು ಬರುತ್ತಿದ್ದ ತಮಗಿಂತಾ ಕೆಳಜಾತಿಯವರಿಗೆ ಸಣ್ಣೇಗೌಡ, ದೊಡ್ಡೇಗೌಡ, ಗಿಡ್ಡೇಗೌಡ, ಉದ್ದೇಗೌಡ ಎಂಬುದಾಗಿಯೂ, ಬಂದವರು ದಲಿತರಾಗಿದ್ದಲ್ಲಿ ಕರಿಯ, ಬಿಳಿಯ, ಸಣ್ಣ, ದೊಡ್ಡ ಅಂತಲೂ ಹೆಸರು ಸೂಚಿಸುತ್ತಿದ್ದರು ಹೀಗಾಗಿ ನಮಗೆಲ್ಲಾ ಕೆಟ್ಟ ಹೆಸರು ಅವರಿಗೆ ಮಾತ್ರ ಚೆಂದದ ಹೆಸರು. ಇದೂ ಕೂಡಾ ಜಾತಿ ತಾರತಮ್ಯದ ಒಂದು ಶೋಷಣೆ ಎಂಬುದು ಅವತ್ತಿನ ಚರ್ಚೆ.
ಇರಬಹುದೇನೋ... ಆದರೆ ಇವತ್ತಿನ ಕಾಲಕ್ಕೆ ಆ ವಾದ ಅಪ್ರಸ್ತುತ. ಕಾರಣ, ಈಗ ಬಹುತೇಕರು ತಮ್ಮ ಮಕ್ಕಳಿಗೆ ಅವರವರೇ ಹೆಸರಿಟ್ಟುಕೊಳ್ಳುತ್ತಾರೆ ಮತ್ತು ಚೆಂದದ ಹೆಸರಿಟ್ಟುಕೊಳ್ಳುತ್ತಾರೆ. ಕೆಲವು ಹೆಸರುಗಳಿಗಂತೂ ಯಾವ ವ್ಯಾಕರಣ ಗ್ರಂಥ ಹುಡುಕಿದರೂ ಅರ್ಥ ಸಿಗಲಾರದು.!
ಇನ್ನು ಕೆಲವು ಹೆಸರುಗಳು ಕೇಳಿದ ಐದು ನಿಮಿಷಕ್ಕೆ ಮರೆತೇ ಹೋಗಿಬಿಡುತ್ತವೆ. ಮತ್ತೆ ಕೆಲವು ಉಚ್ಚರಿಸಲೇ ಹರಸಾಹಸ ಪಡಬೇಕು.
ಹೀಗಾಗಿ ಈಗ ಕರಿಯ, ಬಿಳಿಯ, ಗಿಡ್ಡ ಎಂಬ ಹೆಸರುಗಳೆಲ್ಲಾ ಇತಿಹಾಸ ಸೇರಿಕೊಳ್ಳುತ್ತಿವೆ.
ಬ್ರಾಹ್ಮಣರು ಅದೆಷ್ಟು ಮಕ್ಕಳಿಗೆ ಹೆಸರಿಟ್ಟರೋ ತಿಳಿಯದು, ಆದರೆ ನಮ್ಮಲ್ಲಿ ಮೇಲ್ಜಾತಿಯ ಕೆಲವು ಹಳೆಯ ತಲೆಗಳು ತಮ್ಮಲ್ಲಿಗೆ ಕೂಲಿಗೆ ಬರುವ ಕೆಳ ಜಾತಿಯ ಮಕ್ಕಳಿಗೆ ಚೆಂದದ ಹೆಸರೇನಾದರೂ ಇಟ್ಟರೆ ವಿಪರೀತ ಉರಿದುಕೊಳ್ಳುತ್ತಿದ್ದರು. ' ಅಯ್ಯಾ ಇವ್ರ್ ಸೊಡ್ಡಿಗೆ ನಮ್ ಮಕ್ಳ ಹೆಸ್ರೆಲ್ಲಾ ಕೆಳ್ ಜಾತಿಯವು ಇಟ್ಕಳಂಗಾಯ್ತು' ಅಂತಲೂ ಕೂಲಿ ಕಾರ್ಮಿಕರೋ, ಅವರ ಮಕ್ಕಳೋ ಅಪರೂಪಕ್ಕೆ ಚೆಂದದ ಬಟ್ಟೆ ಧರಿಸಿದರೆ ' ತಿನ್ನಕ್ ಗತಿಯಿಲ್ಲ ಇವ್ ಹಿಂಡು ಶೋಕಿ ನೋಡ್ರಾ...' ಎಂದು ಮೂದಲಿಸುತ್ತಿದ್ದರು. ಇವೆಲ್ಲಾ ನಾವು ನಿತ್ಯ ನೋಡುತ್ತಿದ್ದ ಸಂಗತಿಗಳು.
ಈ ರೀತಿಯ ಮೂದಲಿಕೆಗಳು ಸರ್ವವ್ಯಾಪಿ. ಬಣ್ಣದಿಂದ, ಜಾತಿಯಿಂದ, ಆಕಾರದಿಂದ , ಆರ್ಥಿಕ ಸ್ಥಿತಿಯಿಂದ, ವರ್ತನೆಯಿಂದ ಎದುರಿಗಿರುವವನನ್ನು ತೂಗುವ , ಅಳೆಯುವ, ಹೀಗಳೆಯುವ, ಓಲೈಸುವ ಮನುಷ್ಯನ ದುರ್ಬುದ್ದಿ ಕೇವಲ ಒಂದು ವರ್ಗಕ್ಕೋ, ಪ್ರದೇಶಕ್ಕೋ, ದೇಶಕ್ಕೋ ಸೀಮಿತವಲ್ಲ. ಅದು ಜಗತ್ತಿನಾದ್ಯಂತ ಹಬ್ಬಿಕೊಂಡಿರುವ ಕೊಳಕು ಪಾಚಿ. ಆ ಪಾಚಿ ಮನುಷ್ಯನ ತಲೆಯೊಳಗೆ ಹುಟ್ಟಿ ಬೆಳೆದು ಚಾಚಿಕೊಳ್ಳುವುದರಿಂದ ಅದನ್ನು ಹೊರಗಿನಿಂದ ತಿಕ್ಕಿ ತೊಳೆಯುವುದು ಅಸಾಧ್ಯ.
ಅಮೇರಿಕಾದಂತಹ ಅತೀ ಮುಂದುವರೆದ ನಾಗರಿಕ ದೇಶದಲ್ಲೂ ಕಪ್ಪಗಿನ ಜನರನ್ನು ಹೀನವಾಗಿ ನೋಡಲಾಗುತ್ತದೆ. ಅವರ ಮೇಲೆ ಕ್ರೌರ್ಯವನ್ನು ಮೆರೆಯುತ್ತಾರೆ. ಹೀಗಿರುವಾಗ ಜಾತಿ, ವರ್ಣದ ಕೂಪದಲ್ಲೇ ಬಿದ್ದು ಹೊರಳಾಡುವ ನಾವು ಇವುಗಳಿಂದ ಅತೀತರಾಗುವುದು ಹೇಗೆ ಸಾಧ್ಯ!? ನಾವು ಈ ತಾರತಮ್ಯ, ಅವಗುಣಗಳ ಗೋಡೆಯನ್ನು ದಾಟಲು ಬಯಸಿದರೂ ಕೂಡಾ ಬಹುತೇಕ ಸಂದರ್ಭಗಳಲ್ಲಿ ನಮ್ಮೊಳಗಿನ ಅಸೂಯೆ, ಸಣ್ಣತನಗಳು ನಮ್ಮನ್ನು ದಾಟಲಾಗದಂತೆ ತಡೆದು ನಿಲ್ಲಿಸುತ್ತವೆ. ಹೀಗಾಗಿ ದಾಟಬಹುದಾದ ಗೋಡೆಯೆದುರೂ ನಾವು ಕುಬ್ಜರಾಗಿ ನಿಂತುಬಿಡುತ್ತೇವೆ. ಗೋಡೆ ದೈತ್ಯಾಕಾರವಾಗಿ ಗಹಗಹಿಸುತ್ತದೆ.
ಯಾವನೋ ನಮಗೆ ಸಂಬಂಧವೇ ಇಲ್ಲದ ನಮ್ಮ ಕಣ್ಣಳತೆಯಲ್ಲಿ ಓಡಾಡುತ್ತಿದ್ದವನು ಯಾವತ್ತಾದರೂ ಆರ್ಥಿಕವಾಗಿಯೋ, ಮತ್ಯಾವ ರೀತಿಯಲ್ಲೋ ಒಂಚೂರು ಚಿಗಿತುಕೊಂಡರೆ ನಮ್ಮೊಳಗಿನ ಅಸೂಯೆಗೆ ಸಣ್ಣದಾಗಿ ಕಿಡಿ ಬಿದ್ದು ಹೊಗೆಯಾಡತೊಡಗುತ್ತದೆ. ' ನನ್ಮಗ ಹೆಂಗಿದ್ದೋನು ಹೆಂಗಾದ ಮಾರಾಯಾ...' ಎಂದು ನಮ್ಮೊಳಗಿನ ಹೊಗೆಯನ್ನು ಅಲ್ಲಲ್ಲಿ ಹೊರಹಾಕತೊಡಗುತ್ತೇವೆ.
ನಮ್ಮ ಕುಟುಂಬದವನೇ ಯಾವನಾದರೊಬ್ಬ ಬೆಳೆದುಬಿಟ್ಟರೆ, ಹೆಣ್ಣುಮಗಳೊಬ್ಬಳು ದುಡ್ಡಿರುವವನನ್ನು ಮದುವೆಯಾದರೆ, ಪಕ್ಕದ ಮನೆಯವನು ಕಾರು ಕೊಂಡರೆ, ಬಡ ಹುಡುಗನೋ, ಕೂಲಿ ಕಾರ್ಮಿಕನ ಮಗನೊಬ್ಬ ಉನ್ನತ ಶಿಕ್ಷಣ ಪಡೆದರೆ, ಮತ್ಯಾವನೋ ಒಂದಷ್ಟು ಎತ್ತರಕ್ಕೇರಿದರೆ ನಮ್ಮೊಳಗಿನ ಸಣ್ಣತನಕ್ಕೆ ಬೆಂಕಿ ಬೀಳುತ್ತದೆ. ಇನ್ನು ಕೆಲವರಂತೂ ಮತ್ತೊಂದಷ್ಟು ಮುಂದೆ ಹೋಗಿ ಆತನಿಗೇನಾದರೂ ಕೇಡು ಮಾಡಬಹುದಾ ಎಂಬ ರಹಸ್ಯ ಪ್ರಯತ್ನಕ್ಕೆ ಬೀಳುತ್ತಾರೆ.
ಇವೆಲ್ಲಾ ಜಾತಿಯಿಂದ ಬಂದಂತಹವಲ್ಲ, ಹುಟ್ಟಿನಿಂದ ಬಂದಂತಹ ನೀಚಗುಣಗಳು. ಇವಕ್ಕೆ ಹೊರಗೆಲ್ಲೂ ಮದ್ದಿಲ್ಲ.
ನಮ್ಮ ಅಂತರಂಗ ಶುದ್ಧಿಯನ್ನು ನಾವೇ ಕೈಗೊಳ್ಳಬೇಕು.
Comments
Post a Comment