Skip to main content

ಮೊದಲ ಮಳೆಯ ಹೊತ್ತಿಗೆ ಹಳೆಹಳೆಯ ನೆನಪುಗಳು

ಬೆಳಿಗ್ಗೆಯೇ ಚಿಕ್ಕಮಗಳೂರಿನಲ್ಲಿ ಸಣ್ಣಗೆ ಮಳೆ.
 ನಾವು ಮಲೆನಾಡಿಗರಿಗೆ ಮಳೆ ಬಂತೆಂದರೆ ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ನವಿರು ನೆನಪುಗಳಿಗೆ ಚಿಗುರು ಬಂದುಬಿಡುತ್ತದೆ.
ಅದರಲ್ಲೂ ಊರು ಬಿಟ್ಟು ಹೊರಗೆಲ್ಲೋ ನೆಲೆಸಿದವರಿಗಂತೂ ಸಣ್ಣಗೆ ಸೆಳೆತ ಪ್ರಾರಂಭ. ಅಂದಹಾಗೆ ಮೇ ಮಧ್ಯಭಾಗಕ್ಕೇ ಮಳೆ ಶುರುವಾಗುವ ಪರಿಪಾಠ ನಿಂತು ಹೋಗಿ ಹತ್ತಿರತ್ತಿರ ದಶಕವೇ ಕಳೆದು ಹೋಯ್ತೇನೋ...? ಈಗೇನಿದ್ದರೂ ಜುಲೈ ಹತ್ತರ ನಂತರವೇ ಪೂರ್ಣಪ್ರಮಾಣದ ಮಳೆಗಾಲದ ಶುರುವಾತು ಅನಿಸಿಬಿಟ್ಟಿದೆ. ತೊಂಬತ್ತರ ದಶಕದಲ್ಲಿ ಬಿರು ಬೇಸಿಗೆ ದಿನಗಳು ಮುಗಿದು ಮೇ ಹದಿನೈದು ದಾಟಿದ ತಕ್ಷಣ  ಇದ್ದಕ್ಕಿದ್ದಂತೆ ಪ್ರಕೃತಿಯಲ್ಲಿ ದೊಡ್ಡದೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿತ್ತು.  ಕಾರ್ಮೋಡಗಳು ಗಡಿಬಿಡಿಯಿಂದ ಅತ್ತಿಂದಿತ್ತ ಚಲಿಸುತ್ತಾ ಕಣ್ಣು ಕುಕ್ಕುತ್ತಿದ್ದ ಬಿರು ಬಿಸಿಲನ್ನು ಹಠಾತ್ತನೆ ತನ್ನೊಳಗೆ ಅಂತರ್ಗತಗೊಳಿಸಿಕೊಂಡು ಗವ್ವನೆ ಕತ್ತಲು ಕವಿದಂತಾಗಿ  ಪಟಾರನೆ ಸಿಡಿಲು ಬಡಿದು ಸಣ್ಣಗೆ ಮಳೆ ಉದುರಾಡತೊಡಗಿತೆಂದರೆ ಬೇಸಿಗೆಯ ಬೇಗೆಗೆ ಬಸವಳಿದು ಬೆವರು ಬಸಿಯುತ್ತಾ ಹೆಬ್ಬಾವಿನಂತೆ ಬಿದ್ದುಕೊಂಡಿರುತ್ತಿದ್ದ ಮಲೆನಾಡು ಧಿಗ್ಗನೆದ್ದುಕುಳಿತು ಧಾವಂತಕ್ಕೆ ಬೀಳುತ್ತಿತ್ತು. ಮಲೆನಾಡಿಗರಂತೆಯೇ ಅಂಗಳದ ಮೂಲೆಯಲ್ಲಿ ಸೋಮಾರಿಯಂತೆ ಬಿದ್ದಿರುತ್ತಿದ್ದ ಸೌದೆಯನ್ನು ಲಗುಬಗೆಯಿಂದ ಕೊಟ್ಟಿಗೆಗೆ ಒಟ್ಟುವ ಗಡಿಬಿಡಿ. ಮನೆಗೊಂದರಂತೆ ವಾಹನಗಳಿರದಿದ್ದ ಅವತ್ತಿನ ಕಾಲಕ್ಕೆ ಮಳೆಗಾಲಕ್ಕಾಗುವಷ್ಟು ಭತ್ತವನ್ನು ಮಿಲ್ಲಿಗೆ ಹಾಕುವ ಸಲುವಾಗಿ ಮನೆಯಂಗಳಕ್ಕೆ ಎತ್ತಿನ ಗಾಡಿಯೋ, ಟ್ರ್ಯಾಕ್ಟರ್ರೊ, ಟಿಲ್ಲರ್ರೋ ಬಂದು ನಿಲ್ಲುತ್ತಿತ್ತು. ಮಕ್ಕಳಿಗೆ ನಿಂತ ಟ್ರ್ಯಾಕ್ಟರಿನ ಸ್ಟೇರಿಂಗ್ ತಿರುವುತ್ತಾ ತಾವೇ ಓಡಿಸುತ್ತಿರುವಂತೆ ಭ್ರಮಿಸಿಕೊಳ್ಳುವ ಸಂಭ್ರಮ.ದೊಡ್ಡವರಿಗೆ ಸಾಮಾನಿನ ಪಟ್ಟಿ ಹಾಗೂ ಚೀಲದೊಂದಿಗೆ ಇದ್ದ ಒಂದು  ಬಸ್ಸಿನೊಳಗೆ ತೂರಿಕೊಂಡು ಪೇಟೆಗೆ ಹೋಗಿ ಮಳೆಗಾಲಕ್ಕೆ ಬೇಕಾದ ದಿನಸಿ ಕೊಂಡು, ಹೊಸ ಛತ್ರಿ, ಮಕ್ಕಳ ಬ್ಯಾಗು, ಪುಸ್ತಕ, ಮಳೆಗೆ ಹೊದೆಯಲು ಬೇಕಾದ ಪ್ಲಾಸ್ಟಿಕ್ಕು, ಪ್ಲಾಸ್ಟಿಕ್ ಚಪ್ಪಲಿ ರೈನ್ ಬೂಟುಗಳನ್ನೆಲ್ಲಾ ಕೊಂಡು ಮತ್ತದೇ ತುಂಬಿ ತುಳುಕುವ ಬಸ್ಸಿನೊಳಕ್ಕೆ ತೂರಿಕೊಂಡು ಬಸ್ಸಿಳಿದು ಸಣ್ಣ ಮಳೆಗೆ ಕೆಸರಿನಿಂದ ಗಿಜಿಗುಡುವ ಮಣ್ಣಿನ ರಸ್ತೆಯಲ್ಲಿ ಮನೆ ಸೇರಿದರೆಂದರೆ ಮಳೆ ಋತು ಕಳೆಯುವ ತನಕ ಬಹುತೇಕರು ಪೇಟೆಯತ್ತ ತಲೆಯಿಡುತ್ತಿರಲಿಲ್ಲ. ಈ ಮಳೆಗಾಲದ ಬದುಕಿಗೆ ಬೇಕಾದ ಪೂರ್ವಯೋಜನೆಗಳನ್ನೆಲ್ಲಾ ಯುದ್ದೋಪಾದಿಯಲ್ಲಿ ಮುಗಿಸಿ ನೊಗ, ನೇಗಿಲು, ಮಿಣಿ, ಕಣ್ಣಿ, ಕಂಬಳಿಗಳೆಲ್ಲಾ ಅಟ್ಟದಿಂದ ಕೆಳಗಿಳಿದವೆಂದರೆ ಆ ವರ್ಷದ " ಆರಂಬ " ಶುರುವಾಯಿತೆಂತಲೇ. ವರ್ಷವಿಡೀ ಕೆಲಸವಿಲ್ಲದೇ ಕಾಡು ಬಿದ್ದ, ಅವರಿವರ ತೋಟದ ಹಲಸಿನ ಮರಗಳ ಕೆಳಗೆ ಟೆಂಟು ಹಾಕಿರುತ್ತಿದ್ದ ಎತ್ತು, ಹೋರಿಗಳನ್ನು ಹುಡುಕಾಡಿ ಎಳತಂದು ಕಣ್ಣಿ ಬಿಗಿದು ಗದ್ದೆಗಿಳಿಸಿದರೆಂದರೆ ಜೋರು ಮಳೆಯಲ್ಲಿ ಇಡೀ ಗದ್ದೆಬಯಲಿಗೆ ಸಂಭ್ರಮ. ಇಡೀ ಜಗತ್ತು ಜೋರು ಮಳೆಯನ್ನು ನೋಡುತ್ತಾ ಬೆಚ್ಚಗೆ ಮನೆಯೊಳಗೆ ಕುಳಿತಿದ್ದರೆ ಮಲೆನಾಡಿನ ರೈತರು ಜಗತ್ತಿಗೆ ಅನ್ನ ನೀಡುವ ಸಲುವಾಗಿ ಘಟ್ಟದ ಕಡೆಯಿಂದ ಬೀಸುವ 'ಹುಡುರು' ( ಚಳಿಗಾಳಿ) ಗಾಳಿಗೆ ಎದೆಯೊಡ್ಡಿ ತರತರನೆ ನಡುಗುತ್ತಾ ಎತ್ತುಗಳಿಗೆ ನೊಗ ಕಟ್ಟಿ ನೇಗಿಲು ಹಿಡಿದು ಕಾಯಕ ಪ್ರಾರಂಭಿಸುತ್ತಾರೆ.
ಜೋರು ಮಳೆಯನ್ನು ದಿಟ್ಟಿಸುತ್ತಾ ಸುಟ್ಟ ಹಲಸಿನ ಬೀಜ ತಿನ್ನುತ್ತಾ ಮನೆಯೊಳಗೆ ಕುಳಿತವರಿಗೆ ಹೆಂಚಿನ ಮಾಡಿನಿಂದ ಸಾಲಾಗಿ ಬೀಳುವ, ಮೂಲೆ ಹೆಂಚುಗಳ ದೋಣಿಯಿಂದ ಕೆಳಗಿನ ಪಾತ್ರೆಗೆ  ಜರ್ರನೆ ಸುರಿಯುವ, ಮನೆ ಬದಿಯ ಬಾಳೆ ಎಲೆಯ ಮೇಲೆ ಪರಪರಪರ ಸದ್ದು ಮಾಡುತ್ತಾ ಮತ್ತೊಂದು ಎಲೆಯಿಂದ ತೊಟ್ಟಿಕ್ಕುವ ನೀರನ್ನು ನೋಡುತ್ತಾ ಕೂರುವುದು ಜಗತ್ತಿನ ಬಾಕಿ ಉಳಿದೆಲ್ಲಾ ಸುಖಕ್ಕಿಂತಾ ಅತಿ ದೊಡ್ಡದು. ಇಂಥಾ ಸನ್ನಿವೇಷಕ್ಕೆ ಮಳೆಯನ್ನು ಆಸ್ವಾದಿಸುವ ಮನುಷ್ಯನೊಳಗಿನ ಕಾಠಿಣ್ಯವನ್ನು ಕರಗಿಸಿ ಹಳೆಯ ನೆನಪುಗಳನ್ನು ಪೋಣಿಸಿದ ಸರದ ತುದಿಯನ್ನು ತುಂಡರಿಸಿ ಮುತ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ನಿಧಾನಕ್ಕೆ ಆಯ್ದುಕೊಳ್ಳುತ್ತಾ ಕೂರುವಂತೆ ಮಾಡುವ ಶಕ್ತಿಯಿದೆ.
ರಾತ್ರಿಯ ಜಡಿಮಳೆಗೆ ಅದೆಂತಹುದೇ ನಿದ್ರಾಹೀನತೆಯನ್ನೂ ತೊಲಗಿಸಿ ಗಾಢನಿದ್ರೆಗೆ ದೂಡಿ ತೊಟ್ಟಿಲು ತೂಗುವ ತಾಖತ್ತಿದೆ. ಹಗಲಿನ ಜಿಟಿಜಿಟಿ ಮಳೆಗೆ 'ಥೂ ಹಾಳು ಮಳೆ ಇತ್ಲಾಗಿ ಜೋರಾಗ್ ಬರಾಕೂ ಇಲ್ಲ ಅತ್ಲಾಗಿ ನಿಂತು ಸಾಯಕೂ ಇಲ್ಲ' ಎಂದು ಸಿಡಿಮಿಡಿಗುಟ್ಟಿಸುವ ಸಣ್ಣತನವೂ ಇದೆ.
ಮಳೆಗೆ ಸಕಾಲಕ್ಕೆ ಸುರಿದು ಬದುಕು ಹಸನಾಗಿಸುವ ಪ್ರೀತಿಯೂ ಇದೆ, ರುದ್ರಭಯಂಕರವಾಗಿ ವರ್ತಿಸಿ ಬದುಕನ್ನು ಮೂರಾಬಟ್ಟೆಯಾಗಿಸುವ ಕ್ರೌರ್ಯವೂ ಇದೆ. ಮಳೆ ಪ್ರಕೃತಿಯ ಕೈಲಿರುವ ಮಂತ್ರದಂಡ. ಒಲಿದರೆ ಜೀವರಾಶಿಗೆ ನೆಮ್ಮದಿ ತರುವ ಮುನಿದರೆ ನೆಮ್ಮದಿಗೆ ಕೊಳ್ಳಿಯಿಡುವ ಚಂಚಲೆ.

" ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ

ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ

ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ... "
ಎಂದು ಬೇಂದ್ರೆಯಜ್ಜ ವರ್ಣಿಸುತ್ತಾರೆ.

ಅನಾಮಿಕ ಕವಿತೆಯೊಂದು ಈ ಮುಂಗಾರಿನ ಹೊತ್ತಿನಲ್ಲಿ ತುಂಬಾ ಕಾಡುತ್ತದೆ.
"ಮೊದಲ ಮಳೆಗೆ ಮುಕವೊಡ್ಡಿ
ಹಗುರಾಯ್ತು ಮನಸು ಮಗುವಾಗಿ
ತಿರುತಿರುಗಿ ರುತುಚಕ್ರದ ಗಾಲಿ
ತಂತು ನವೋಲ್ಲಾಸವ ತೇಲಿ

ಗಿಜಿಗುಡುವ ಮಳೆಯಲ್ಲೂ ಏನಿಂತ ಮಾಯೆ
ತೊಟ್ಟಿಕ್ಕೊ ಸೂರಿಂದ ಸಂಗೀತ ಶಾಲೆ
ಗುಡುಗುಡುಸೋ ಬಾನಿಂದ ಪರಶಿವನ ಲೀಲೆ
ಮುತ್ತು ಹನಿ ಪೋಣಿಸಿದೆ ಒಲವಿನಾ ಓಲೆ

ಹೊಸ ಬಾನು,ಹೊಸ ಭೂಮಿ, ಹೊಸ ಮೋಡ,ಮಿಂಚು
ಬತ್ತಿದೆದೆಯಲ್ಲೂ ಹೊಸ ಹಸಿರ ತಂತು
ಮಂದ ಬೆಳಕಲ್ಲಿ ಮಂಜಂತೆ ತಬ್ಬು
ಜಗದೊಡೆಯ, ಎಲ್ಲೆಲ್ಲೂ ಈ ಭಾವ ಹಬ್ಬು..."

ಬೆಳಿಗ್ಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಇಷ್ಟೆಲ್ಲವನ್ನೂ ಬರೆಸಿತು. ಬರೆದು ಮುಗಿಸಿ ತಲೆಯಿತ್ತಿದರೆ ಮಳೆ ಅದ್ಯಾವಾಗಲೋ ಹರೆದು ಸಣ್ಣಗೆ ಬಿಸಿಲು.!

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
 ಇಡೀ ಬಸ್ಸಲ್ಲಿ ಒಬ್ಬರೇ ಒಬ್ಬರು ಪತ್ರಿಕೆ ಓದುತ್ತಿದ್ದರು. ಓದಿದ ನಂತರ ಮಡಚಿ ಬ್ಯಾಗಿಗಿಟ್ಟುಕೊಂಡರು. ಪಕ್ಕ ಕುಳಿತವರ‌್ಯಾರೂ ಬಗ್ಗಿ ಕಣ್ಣು ಹಾಯಿಸಲಿಲ್ಲ, ಯಾರೂ ಸಾಲ ಕೇಳಲಿಲ್ಲ.!  ನಾವು ಮೊಬೈಲು, ಅಂತರ್ಜಾಲದ ವ್ಯಸನಿಗಳಾಗುವುದಕ್ಕೂ ಮುಂಚೆ ಹೇಗೆ ಪತ್ರಿಕೆ, ಪುಸ್ತಕಗಳೊಂದಿಗೆ ಬೆಸೆದುಕೊಂಡಿದ್ದೆವು ಮತ್ತು ಈಗ ಹೇಗೆ ಓದಿನಿಂದ ವಿಮುಖರಾಗಿದ್ದೇವೆ  ಎಂಬುದಕ್ಕೆ ಆಗಾಗ ಇಂತಹ ಸಣ್ಣ ಸಣ್ಣ ಉದಾಹರಣೆಗಳು ಕಣ್ಣಿಗೆ ಬೀಳುತ್ತವೆ.  ಹಿಂದೆಲ್ಲಾ ಒಬ್ಬ ವ್ಯಕ್ತಿ ಪತ್ರಿಕೆ ಹಿಡಿದು ಬಸ್ಸು ಹತ್ತಿದರೆ ಆ ಪತ್ರಿಕೆ ಇಡೀ ಬಸ್ಸನ್ನು ಸುತ್ತಿ ಬರುತ್ತಿತ್ತು.  ಯಾರಾದರೂ ಓದುತ್ತಿದ್ದರೆ ಪಕ್ಕದಲ್ಲಿ ಕುಳಿತವರು ಕೊಕ್ಕರೆಯಂತೆ ಕತ್ತು ಉದ್ದ ಮಾಡಿ ಓದಲು ಯತ್ನಿಸುತ್ತಿದ್ದರು. ಹಿಂದಿನ ಸೀಟಿನವನು ಸೀಟಿನ ಸಂದಿಯಲ್ಲಿ ಒಂದೇ ಕಣ್ಣಿಟ್ಟು ಇಣುಕುತ್ತಿದ್ದನು, ಬಸ್ಸು ಎಷ್ಟೇ ತುಂಬಿ ತುಳುಕುತ್ತಿದ್ದರೂ ನಿಂತ ಜಾಗದಲ್ಲಿಂದಲೇ ತಿರುಗಾ ಮುರುಗಾ ಹೊರಳಿ ಓದುವ ಪ್ರಯತ್ನ ಮಾಡುತ್ತಿದ್ದರು.  ಪತ್ರಿಕೆಯ ಪುಟಗಳು ಹತ್ತುಕಡೆ ಹಂಚಿಕೊಂಡು ಓದಿಸಿಕೊಳ್ಳುತ್ತಿದ್ದವು.  ಸಣ್ಣ ಬಸ್ ನಿಲ್ದಾಣದಲ್ಲೂ ಪುಸ್ತಕದಂಗಡಿ ಇರುತ್ತಿತ್ತು,  ಬಹುತೇಕ ಮಧ್ಯಮ ವರ್ಗದ ಮನೆಗಳಲ್ಲಿ ಯಾವುದಾದರೂ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಪಾಕ್ಷಿಕವೋ ಇರುತ್ತಿತ್ತು.  ಅದೇ ಇವತ್ತು ಬಸ್ಸು ಹತ್ತಿದರೆ ಪ್ರತಿಯೊಬ್ಬರ ಕೈಲೂ ಮೊಬೈಲು ಮಿಣಗುಟ್ಟ...