Skip to main content

ಅಂದಕಾಲದ ಕಥೆ-ವ್ಯಥೆಗಳು

ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಯ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.
ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!
ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.

ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನೆಗೆ ಕರೆದುಕೊಂಡು ಹೋದ. ನಾನೋ ಹಗಲೆಲ್ಲಾ ಕೆಲಸ ಹುಡುಕಿ ಬಿಸಿಲಿಗೆ ಬೆಂಡು ಬಿದ್ದುಹೋಗಿದ್ದೆ. ಪಾದದಿಂದ ತಲೆ ಕೂದಲಿನ ತನಕ ಸರ್ವಾಂಗವೂ ವಿಪರೀತ ನೋವು. ಚಾಪೆ ಕೊಡವಿದ ತಕ್ಷಣ ಬಿದ್ದುಕೊಂಡು ನಿದ್ದೆ ಹೋದೆ. ಅದ್ಯಾವುದೋ ಹೊತ್ತಿನಲ್ಲಿ ಯಾರೋ ‌ನನ್ನನ್ನು ಜೋರಾಗಿ ಅಲುಗಿಸುತ್ತಿರುವಂತಹ ಕನಸು. ಅರೆ ನಿದ್ರೆಯಲ್ಲಿಯೇ ಗಾಬರಿಬಿದ್ದು ತಬರಾಡಿ ಎದ್ದು ಕುಳಿತು ಬಿಡಲಾರದೇ ಅರ್ಧಂಬರ್ದ ಕಣ್ಣು ಬಿಟ್ಟು ನೋಡಿದರೆ ರೂಮು ಕೊಟ್ಟು ಉಪಕರಿಸಿದ ಪುಣ್ಯಾತ್ಮ ಸಾಕ್ಷಾತ್ ಜವರಾಯನಂತೆ ಕುಕ್ಕರುಗಾಲಿನಲ್ಲಿ ಎದುರಿಗೆ ಕುಳಿತಿರುವುದು ಮಸುಕು ಮಸುಕಾಗಿ ಕಂಡಿತು.! 'ಇದ್ಯಾಕಲಾ...!?' ಅಂದೆ. ನಂಗೆ ಡ್ಯೂಟಿಗೆ ಹೊತ್ತಾಯ್ತು ಏಳು, ಬೇಗ ಹೊರಡು ಅಂದ.! ಟೈಮು ನೋಡಿದೆ, ಬೆಳಿಗ್ಗೆ ಐದು ಗಂಟೆ. ನಿಂಗೆ ಹೊತ್ತಾದ್ರೆ ನಾನ್ಯಾಕೆ ಹೊರಡಲಿ!? ಅಂದೆ. ನಾನು ರೂಮಿಗೆ ಬೀಗ ಹಾಕಿಕೊಂಡು ಹೋಗಬೇಕು ನೀನೂ ಹೊರಡು ಬಸ್ ಸ್ಟಾಪಿನಲ್ಲಿ ಬಿಟ್ಟು ಹೋಗುತ್ತೇನೆ, ಅಂದ. ಥತ್ ಇದ್ಯಾವ ಕರ್ಮ ಎನಿಸಿ ಎದ್ದು ಮಕವನ್ನೂ ತೊಳೆಯದೇ ಹೊರಟೆ. ನಿನ್ನ ಬ್ಯಾಗೂ ತಗಾ...ಅಂದ. ಓಹ್ ಇದ್ಯಾಕೋ ಎಡವಟ್ಟಾಯ್ತು ಎಂದುಕೊಂಡು ಬ್ಯಾಗ್ ಯಾಕೆ ? ಅಂದೆ. ನಿಂಗೆ ಇಲ್ಲಿಂದ ದೂರ ಆಗುತ್ತೆ ಬೇರೆ ರೂಮ್ ನೋಡಿಕೊ  ಅಂದು ನಿಷ್ಕಾರುಣವಾಗಿ ಬಸ್ ಸ್ಟಾಪಿನಲ್ಲಿ ಬಿಸಾಕಿ ಹೋದ. ಆ ಲ್ಯಾಬ್ ಟೆಕ್ನಿಷಿಯನ್ನಿಗೆ ಅಷ್ಟು ಬೆಳಿಗ್ಗೆ ಅದೇನು ಡ್ಯೂಟಿಯೋ ಎಂದು ಬೈದುಕೊಳ್ಳುತ್ತಾ ಹಿಂದೆ ತಿರುಗಿ ನೋಡಿದರೆ ಅವನ ಬೈಕು ವಾಪಸ್ಸು ಮನೆಯ ಕಡೆಗೆ ಹೋಗುತ್ತಿತ್ತು.! ಹಾಗೆ ಅಪರ ಹೊತ್ತಿನಲ್ಲಿ ಎಬ್ಬಿಸಿ ಹೊರಗೆ ಬಿಸಾಕುವಂತದ್ದು ಅವನಿಗೇನು ರಾವು ಹೊಡೆಯಿತೊ ಅರ್ಥವಾಗಲಿಲ್ಲ ನನಗೆ.
ಒಂದೇ ರಾತ್ರಿ ಕಳೆಯುವುದರೊಳಗೆ ನಾನು ಮೆಜೆಸ್ಟಿಕ್ ಬೆಂಚುಗಳ ಪಾಲು.!
ಮತ್ತೆ ಅವರಿವರಿಗೆ ಕರೆ ಮಾಡಿ ಬೇಡುವ ಕಾರ್ಯಕ್ರಮ. ಅಂತೂ ಸಂಜೆಯ ಹೊತ್ತಿಗೆ ಊರಿನ ಗೆಳೆಯನೊಬ್ಬ ಬಿಟಿಎಮ್ ಹತ್ತಿರ ಬರಲು ಹೇಳಿದ. ಹೋದರೆ ಮತ್ಯಾರೊ ಅವನ ಗೆಳೆಯರ ರೂಮಿಗೆ ಬಿಟ್ಟ. ನೋಡಿದರೆ ಅವರೆಲ್ಲರೂ ಊರಿನ ಕಡೆಯ ಪರಿಚಿತ ಪ್ರಾಣಿಗಳೇ... ಅದನ್ನು ರೂಮು ಅನ್ನಲು ಸಾಧ್ಯವೇ ಇಲ್ಲದಂತಹ ಕೇವಲ ನಾಲ್ಕೂವರೆ ಅಡಿ ಉದ್ದ ಆರು ಅಡಿ ಅಗಲದ ಗೂಡು. ಅದರೊಳಗೆ ಐದು ಜನರ ಶಯನೋತ್ಸವ! ನಾನೋ ಆರು ಅಡಿ ಉದ್ದ ರೂಮು ನಾಲ್ಕೂವರೆ ಅಡಿ! ಕಾಲು ಚಾಚಿದರೆ ಗೋಡೆ ತಡೆದು ನಿಲ್ಲಿಸುತ್ತಿತ್ತು. ಮುಕ್ಕಾಲು ಕಾಲಿನಲ್ಲೇ ಬೆಳಗಿನ ತನಕ ಮಲಗಬೇಕಿತ್ತು. ಬೆಳಗೆದ್ದು ಹೋದರೆ ಹಗಲಿಡೀ ನಿಲ್ಲುವ ಕೆಲಸ. ನಮ್ಮ ಜೊತೆ ಸಾಬರ ಹುಡುಗನೂ ಇದ್ದ. ಅವನೇ ನಮ್ಮ ಅರಮನೆಯ ನಾಯಕ. ನೆಟ್ಟಗೆ ಊಟವೂ ಇರುತ್ತಿರಲಿಲ್ಲ. ಒಂದು ಭಾನುವಾರ ಮಟನ್ ಬಿರ್ಯಾನಿ ಕೊಡಿಸುತ್ತೇನೆಂದು ಅಲ್ಲೇ ಪಕ್ಕದ ಗುರಪ್ಪನ ಪಾಳ್ಯದ ಗಲ್ಲಿಗೆ ಕರೆದುಕೊಂಡು ಹೋದ. ಉಳಿದವರು ಬಿರ್ಯಾನಿ ತುಂಡನ್ನು ಚಪ್ಪರಿಸಿ ತಿನ್ನುತ್ತಿದ್ದರೆ ನನಗೆ ಮಾತ್ರ ಯಾಕೋ ಮಟನ್ ವಾಕರಿಗೆ ಬಂದಂತಾಯಿತು ತಿನ್ನದೇ ಎದ್ದುಬಿಟ್ಟೆ. ಹೊರಗೆ ಬಂದಮೇಲೆ ತಿಳಿಯಿತು ಅದು ಗೋಮಾಂಸವೆಂದು. ವಿಪರೀತ ವಾಂತಿ ಮಾಡಿದೆ. ಒಂದು ವಾರ ಬೇರೆ ಊಟವೂ ನೆಟ್ಟಗೆ ಸೇರಲಿಲ್ಲ. ತುಂಬಾ ವಿಷಾದದಿಂದ ಆ ಕೋಣೆ ತೊರೆದೆ. ದರವೇಸಿ ಜೀವನ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡು ಮತ್ತೆಲ್ಲಿಗೋ ಕರೆದೊಯ್ದಿತು.

ಅಂಡಮಾನಿನ ಕಾಲಾಪಾನಿ ಶಿಕ್ಷೆಯ ಬಗ್ಗೆ ಏನೋ ಓದುತ್ತಿದ್ದಾಗ ಇದು ನೆನಪಾಯಿತು. ಇವತ್ತಿಗೆ ಅದನ್ನೆಲ್ಲಾ ಒಳಗೇ ನಕ್ಕುಕೊಳ್ಳುತ್ತಾ ಬರೆಯುತ್ತೇನೆ, ವಿಷಣ್ಣತೆಯ ನಗು.! ಆದರೆ ಆ ಕಾಲಕ್ಕೆ ಇವೆಲ್ಲಾ ಹತ್ತಲು ಪರದಾಡುತ್ತಿದ್ದ ಹಿಮಾಲಯದಂತಹ ದಟ್ಟ ಎತ್ತರದ ಸಮಸ್ಯೆಗಳು.

Comments

Popular posts from this blog

 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...