Skip to main content

ನಿಮ್ಮ ಬ್ರೈನ್ ಆರೋಗ್ಯವಾಗಿದೆಯಾ...!?

ಸಣ್ಣದೊಂದು ಟೆಸ್ಟ್!
ನಿಮಗೆ ಇತ್ತೀಚೆಗೆ ಎಷ್ಟು ಜನರ ಮೊಬೈಲ್ ನಂಬರ್ ಗಳು ನೆನಪಿವೆ ? ಬೆಂಗಳೂರಿನಂತಹ ನಗರದ ಒಂದು ಸಲ ಹೋಗಿದ್ದ ಯಾವುದೋ ಬಡಾವಣೆಯ ಯಾವುದೊ ರಸ್ತೆಯ ವಿಳಾಸ ಹಲವು ತಿಂಗಳ ನಂತರ ಮತ್ತೆ ಹೋಗಲೆಂದು ನೆನಪಿಸಿಕೊಂಡರೆ ನೆನಪಾಗುತ್ತದಾ ? ಫೇಸ್ಬುಕ್ಕಿನಲ್ಲೊ ಮತ್ತೆಲ್ಲೋ ಒಂದು ಸಲ ಭೇಟಿಯಾದ, ಮೆಸೇಜ್ ಮಾಡಿಕೊಂಡ, ಕರೆವಮಾಡಿದ ವ್ಯಕ್ತಿ ಮತ್ತಿನ್ನ್ಯಾವಾಗಲೋ ಸಿಕ್ಕಿದರೆ ಥಟ್ಟನೆ ಗುರುತು ಹತ್ತುತ್ತದಾ ?
ಹೌದು ಇವೆಲ್ಲಾ ಮೊದಲಿನಂತೆಯೇ ನನಗೆ ಸಲೀಸಾಗಿ ಒದಗುತ್ತಿದೆ ಎಂದರೆ  ಅವನು ಯಾವ ತಂತ್ರಜ್ಞಾನಕ್ಕೂ ಗುಲಾಮನಾಗಿಲ್ಲ ಎಂದರ್ಥ. ಹಾಗೂ ಅವನು ಈ ಜಗತ್ತಿನ ಆರೋಗ್ಯವಂತ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಮೊಬೈಲ್, ಸ್ಮಾರ್ಟ್ ಫೋನ್ ಇರದೇ ಇದ್ದ ಕಾಲದಲ್ಲಿ ನಮ್ಮ ತಲೆಯೊಳಗೆ ಅದೆಷ್ಟೊಂದು ದೂರವಾಣಿ ಸಂಖ್ಯೆಗಳು ಹುದುಗಿ ಕುಳಿತಿದ್ದವು.! ಎಸ್ಟಿಡಿ ಬೂತ್ ಅಥವಾ ಮನೆಯ ಸ್ಥಿರ ದೂರವಾಣಿಯೆದುರು ಕುಳಿತರೆ ಹತ್ತಾರು ಜನರಿಗೆ ಯಾವುದೇ ಡೈರಿ ತಡಕಾಡದೇ ನಂಬರುಗಳನ್ನು ನೆನಪಿಸಿಕೊಂಡು ಕರೆ ಮಾಡುತ್ತಿದ್ದೆವು. ಆದರೆ ಇವತ್ತು ಅತ್ಯಂತ ಅಗತ್ಯ ಸಂಖ್ಯೆಗಳೂ ನೆನಪಾಗುವುದಿಲ್ಲ. ಪ್ರತಿಯೊಂದಕ್ಕೂ ಫೋನ್ ತಡಕಾಡುತ್ತೇವೆ.  ಇದು ನಮಗಂಟಿರುವ ದೊಡ್ಡ ಸಮಸ್ಯೆಯೆಂದು ನಮಗರಿವಾಗುವುದು ಒಂದೋ ಫೋನ್ ಬ್ಯಾಟರಿ ಸತ್ತುಹೋದಾಗ ಇಲ್ಲವೇ ಫೋನ್ ಕಳೆದುಹೋದಾಗ.!
ಇನ್ನು ಮೊದಲಿನಂತೆ ಒಂದು ಬಾರಿ ಹೋಗಿದ್ದ ವಿಳಾಸಕ್ಕೆ ಮತ್ತೆ ಹಲವು ತಿಂಗಳ ನಂತರ ಯಾವುದೇ ಮರೆವಿನ ಅಡಚಣೆಯಿಲ್ಲದೆ  ಹೋಗಿ ತಲುಪಲಾಗುತ್ತೇವಾ ಅಂದರೆ ಅದೂ ಇಲ್ಲ. ಕಾರಣ ಎಲ್ಲಿಗೆ ಹೊರಡುವುದಾದರೂ ನಮಗಿಂತ ಮೊದಲು ಆ್ಯಕ್ಟಿವ್ ಆಗುವುದು ಮ್ಯಾಪ್.! ಈ ಮ್ಯಾಪಿಗೆ ನಮ್ಮ ಮೆದುಳು ಗುಲಾಮನಾಗಿರುವುದರಿಂದಲೇ ಯಾವ ವಿಳಾಸವನ್ನೂ ನೆನಪಿಟ್ಟುಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಹೀಗಾಗಿ ಮೆದುಳಿನ ಡಿಫಾಲ್ಟ್ ಮ್ಯಾಪ್ ಅರೆನಿದ್ರೆಗೆ ಜಾರಿದೆ.
 ಇದರ ಜೊತೆಗೆ ನಮಗೀಗ ಇಂಟರ್ನೆಟ್ಟು, ಸಾಮಾಜಿಕ ಜಾಲತಾಣಗಳನ್ನು ತೃಣಕ್ಕೆ ಸಮವೆಂಬಂತೆ ದೂರವಿಟ್ಟು ಮೊದಲಿನಂತೆ ಓದಲು, ಬರೆಯಲು, ಮತ್ತೇನೋ ಚಟುವಟಿಕೆಗಳಲ್ಲಿ ನಿರಾಳವಾಗಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿದೆಯಾ ? ಉಹುಂ...! ತುಂಬಾ ಕಷ್ಟವೆನಿಸುತ್ತಿದೆ. ಫೋನ್ ಬದಿಗಿಟ್ಟು ಅದೇನನ್ನು ಮಾಡಲು ಹೊರಟರೂ ನಡುನಡುವೆ ಆಗಾಗ ಫೋನ್ ತೆರೆದು ನೋಡುತ್ತಲೇ ಇರುತ್ತೇವೆ.  ಏಕಾಗ್ರತೆ ಎಂಬೋದನ್ನು ಅಂತರ್ಜಾಲ ಸಮಗ್ರವಾಗಿ ಕಿತ್ತು ತನ್ನ ಜೇಬಿಗಿಟ್ಟುಕೊಂಡಿದೆ. ನಾವು ತಂತ್ರಜ್ಞಾನದ ಮುಷ್ಟಿಯಿಂದ ಹೊರಬರಲು ನಿತ್ಯವೂ ಹೆಣಗುತ್ತಿದ್ದೇವೆ ಎಂದಾದರೆ ನಮ್ಮ ಆಂತರ್ಯದ ಯಂತ್ರ ಆರೋಗ್ಯ ಕಳೆದುಕೊಂಡಿದೆ ಎನ್ನಲು ಬೇರೆ ಸಾಕ್ಷಿಯ ಅಗತ್ಯವೇ ಇಲ್ಲ.!

ಇವೆಲ್ಲಾ ಸಣ್ಣ ಸಂಗತಿಗಳೆನಿಸಬಹುದು. ಆದರೆ ತಣ್ಣಗೆ ಕುಳಿತು ಯೋಚಿಸಿ ನೋಡಿ ತಂತ್ರಜ್ಞಾನ ಎಂಬ ಮಾಯಾವಿ ನಿಮ್ಮದೇನೇನು ಕಿತ್ತುಕೊಂಡಿದ್ದಾನೆ ಎಂಬುದು ಒಂದೊಂದಾಗಿ ನೆನಪಾಗಬಹುದು.!

Comments

Post a Comment

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...