ಅಳಿವಿನಂಚಿನಲ್ಲಿರುವ ಪಕ್ಷಿ ಹಾಗೂ ಅದರ ಕುಟುಂಬವನ್ನು ಉಳಿಸಿಕೊಳ್ಳಲು ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಹಳ್ಳಿಯೊಂದು 36 ದಿನಗಳ ಕಾಲ ಕತ್ತಲೆಯಲ್ಲಿ ಬದುಕಿದ ಹೃದಯ ದೃವಿಸುವಂತಹ ಮಹೋನ್ನತ ಘಟನೆಯಿದು.
ಗುಬ್ಬಚ್ಚಿಯೊಂದು ಗ್ರಾಮದ ಬೀದಿ ದೀಪಗಳ ಮುಖ್ಯ ಸ್ವಿಚ್‌ಬೋರ್ಡ್‌ನಲ್ಲಿ ಮೊಟ್ಟೆಯಿಟ್ಟಿತ್ತು. ಗುಬ್ಬಿಯು ಸುಗಮವಾಗಿ ಕಾವುಕೊಟ್ಟು ಮೊಟ್ಟೆಯೊಡೆದು ಮರಿಗಳು ಹೊರಬರಲು ಅನುವು ಮಾಡಿಕೊಡುವ ಸಲುವಾಗಿ ಜನರು ಬೀದಿ ದೀಪಗಳಿಲ್ಲದೆ ಕೆಲವು ದಿನಗಳನ್ನು ಸಾಗಿಸಲು ನಿರ್ಧರಿಸಿದರು.
ಮೊಟ್ಟೆ ಮರಿಗಳಾಗುವವರೆಗೆ ದೀಪಗಳನ್ನು ಉರಿಸದೇ ಇರುವ ಪರಿಕಲ್ಪನೆಯು ಆ ಗ್ರಾಮದ 20 ವರ್ಷದ ವಿದ್ಯಾರ್ಥಿಯದ್ದು. ಆರಂಭದಲ್ಲಿ ಗುಬ್ಬಚ್ಚಿ ಮತ್ತು ಅದರ ಮೊಟ್ಟೆಗಳನ್ನು ಗಮನಿಸಿದ್ದ ಆ ವಿದ್ಯಾರ್ಥಿ, ಸ್ವಿಚ್ ಬೋರ್ಡಿನೊಳಗಿದ್ದ ಆ ಗೂಡು ಹಾಗೂ ಮೊಟ್ಟೆಗಳ ಫೋಟೋ ತೆಗೆದು ಸುಮಾರು ನೂರು ಕುಟುಂಬಗಳಿರುವ ಆ ಗ್ರಾಮದ ವಾಟ್ಸಾಪ್ ಗುಂಪಿಗೆ ಕಳುಹಿಸಿ, ಮೊಟ್ಟೆಯೊಡೆದು ಮರಿಗಳು ಹೊರಬರುವವರೆಗೂ ಆ ಬೋರ್ಡಿಗೆ ಸಂಪರ್ಕ ಹೊಂದಿರುವ ಬೀದಿದೀಪಗಳನ್ನು ಬಳಸದೇ ಇರಲು ಮನವಿ ಮಾಡಿದ. ಆತನ ಮನವಿಗೆ ಇಡೀ ಗ್ರಾಮ ಓಗೊಟ್ಟು ಮರಿಗಳು ಹೊರಬರುವವರೆಗೂ ಕತ್ತಲಿನಲ್ಲಿಯೇ ದಿನದೂಡಲು ನಿರ್ಧರಿಸಿತು. ಗ್ರಾಮದ ಒಗ್ಗಟ್ಟಿನ ನಿರ್ಧಾರದ ಫಲವಾಗಿ ಮೂವತ್ತಾರು ದಿನಗಳ ಕಾಲ ಬೀದಿ ದೀಪಗಳು ಸ್ಥಬ್ದವಾದವು. ರಾತ್ರಿಹೊತ್ತು ಬೆಳಕಿಲ್ಲದೇ ಹೊರಹೋಗಲು ಭಯಪಡುತ್ತಿದ್ದ ಮಹಿಳೆಯರೂ ಕೂಡಾ ಗುಬ್ಬಿಯ ಕುಟುಂಬಕ್ಕಾಗಿ ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಬೀದಿ ದೀಪಗಳನ್ನು ಆರಿಸಲು ಒಪ್ಪಿಕೊಂಡರು. ಪ್ರತಿಯೊಬ್ಬರ ಮಾನವೀಯತೆಯ ಫಲವಾಗಿ ಗುಬ್ಬಿ ಮರಿಗಳು ಯಾವುದೇ ತೊಂದರೆಯಿಲ್ಲದೇ ಹೊರಬರಲು ಸಾಧ್ಯವಾಯಿತು.
ಇದು ಸಾಮಾಜಿಕ ಮಾಧ್ಯಮದ ಶಕ್ತಿ ಹಾಗೂ ಪ್ರಕೃತಿಯ ಉಳಿವಿಗಾಗಿ ಇರಬೇಕಾದ ಮಾನವೀಯತೆಯ ಹೆಗ್ಗುರುತು.
ಇಂಡಿಯಾ ಟುಡೆಯಲ್ಲಿ ಬಂದಿದ್ದ ಲೇಖನವನ್ನು ಓದಿ ನಾನು ನಿಜಕ್ಕೂ ಕಳೆದುಹೋದೆ. ಈ ಮನ ಕರಗಿಸುವ ವಿಚಾರ ಮತ್ತೊಂದಷ್ಟು ಜನರನ್ನು ತಲುಪಲೆಂದು ಭಾಷಾಂತರಿಸುವ ಸಣ್ಣ ಪ್ರಯತ್ನ.
Comments
Post a Comment