ಇವತ್ತು ನಮ್ಮ ಊರಿನ ಬಳಿಯ ಹುಡುಗನೊಬ್ಬನ ಆತ್ಮಹತ್ಯೆಯ ಸುದ್ದಿ ಕೇಳಿ ಮನಸ್ಸಿಗೆ ಪಿಚ್ಚೆನಿಸಿತು. ಫೋಟೊ ನೋಡಿದರೆ, ಹುಡುಗನ ವಯಸ್ಸು ಇಪ್ಪತ್ತೋ ಇಪ್ಪತ್ತೆರಡೋ ಇರಬಹುದೇನೋ... ಈ ವಯಸ್ಸಿನಲ್ಲಿ ಕೈಯ್ಯಾರೆ ಜೀವ ಕಳೆದುಕೊಳ್ಳುವಂತಹ ಕಷ್ಟ, ಸಮಸ್ಯೆ ಏನಿದ್ದೀತು.!? ಸಂಸಾರದ ಹೊರೆಯಾ ?, ವ್ಯಾಪಾರ ನಷ್ಟವಾ ? ತೀರಿಸಲಾಗದಷ್ಟು ಸಾಲವಾ ? ಉದ್ಯೋಗ ನಷ್ಟ ? ಏನಿದ್ದೀತು... ? ಹೆಚ್ಚೆಂದರೆ ಪರೀಕ್ಷೆಯಲ್ಲಿ ಫೇಲು, ಮನೆಯಲ್ಲಿ ಬೈಗುಳ, ಕೈ ಕೊಟ್ಟ ಹುಡುಗಿಯ infatuation( ಅದನ್ನೇಹುಡುಗರು ಅಮರ ಪ್ರೇಮವೆಂದು ಭ್ರಮಿಸುತ್ತಾರೆ), ಎಲ್ಲದಕ್ಕಿಂತಾ ದೊಡ್ಡದು ತಾಳ್ಮೆಯೇ ಇರದ ದುಡುಕುತನ ಹಾಗೂ ಮುಂಗೋಪ. ಇವಿಷ್ಟೇ... ಇದರಲ್ಲೊಂದು ಸಮಸ್ಯೆ ಹುಡುಗ/ಹುಡುಗಿಯರನ್ನು ಬೆಟ್ಟದಂತೆ ಕಾಡಿ ಕೊಂದುಬಿಡುತ್ತದೆ. ಇವಕ್ಕಿಂತಾ ಹೆಚ್ಚಿನದ್ದು ಒಂದೇ ಒಂದು ಸಮಸ್ಯೆ( ಅಸಲಿಗೆ ಇವು ಸಮಸ್ಯೆಗಳೇ ಅಲ್ಲ!) ಈ ವಯಸ್ಸಿನವರಿಗಿದ್ದರೆ ಕೇಳಿ. ಇವತ್ತಿನ ಸಾಮಾಜಿಕ ವ್ಯವಸ್ಥೆ ಯುವ ಮನಸ್ಸುಗಳನ್ನು ಹೇಗೆ ದುರ್ಬಲವನ್ನಾಗಿಸಿದೆ ಎಂಬುದಕ್ಕೆ ಇಂಥಾ ಉದಾಹರಣೆಗಳು ದಿನಂಪ್ರತಿ ನಮಗೆ ದೊರಕುತ್ತಲೇ ಇರುತ್ತವೆ. ಗಮನಿಸಿ ನೋಡಿ, ಇಂದಿನ ಹುಡುಗರದ್ದು ಎಲ್ಲವೂ ಅತಿ ವೇಗ, ಅತಿರೇಕ, ಅತಿ ಭಾವುಕ. ತಾವು ಬಯಸಿದ್ದೆಲ್ಲವೂ ಅಂದುಕೊಂಡ ಸಮಯದೊಳಗೆ ದಕ್ಕಿಬಿಡಬೇಕೆಂಬ ಕಾತರ. ತಾವು ಮಾಡುತ್ತಿರುವುದೇ ಸರಿ ಹಾಗೂ ಇದು ಮಾತ್ರ ಸರಿ ಎಂಬ ಹುಂಬತನ. ಸಣ್ಣ ಸೋಲನ್ನೂ ...