ಶ್ರೀನಿವಾಸಣ್ಣ ಬೊಂಬಾಯಿಯಿಂದ ಬಂದಿದ್ದ ಸತೀಶನನ್ನು ಬ್ಯೆರಸಾಡಿ ಬೆನ್ನು ಹುಡಿಯಾಗುವಂತೆ ಹೊಡೆದರಂತೆ ಎಂಬುದು ಊರಲೆಲ್ಲಾ ದೊಡ್ಡ ಸುದ್ದಿಯಾಯಿತು.
ಯಾವತ್ತೂ ಯಾರೊಂದಿಗೂ ಜಗಳ ,ಕುಸ್ತಿ ಮಾಡಿಕೊಳ್ಳದ ಈ ಶ್ರೀನಿವಾಸಣ್ಣ ಯಾಕೆ ಆ ಹುಡುಗನೊಂದಿಗೆ ಜಗಳಕ್ಕೆ ಹೋದರು ಎಂಬುದೇ ಹಲವರಿಗೆ ಆಶ್ಚರ್ಯ.!
ಶ್ರೀನಿವಾಸಣ್ಣ ಹೊಡೆದಿದ್ದು ನಿಜವಾದರೂ ಬೆನ್ನು ಪುಡಿಯಾಗಿತ್ತೋ ಅಥವಾ ಪೋಲಿಸರಿಗೆ ದೂರು ಕೊಡುವಾಗ ಸಾಕ್ಷಿಗೆ ಬೇಕಾಗುತ್ತದೆ ಎಂದು ಯಾರೊ ಸತೀಶನಿಗೆ ಉಪಾಯ ಹೇಳಿಕೊಟ್ಟರೋ ಏನು ಕತೆಯೊ...! ಸತೀಶ ಹೋಗಿ ಆಸ್ಪತ್ರೆ ಸೇರಿಕೊಂಡು ಮೈಗೆಲ್ಲಾ ಬ್ಯಾಂಡೇಜು ಸುತ್ತಿಸಿಕೊಂಡ.
ಯಾವತ್ತೂ ಗಲಾಟೆ ವಿವಾದಗಳಿಗೆ ಸ್ಟೇಷನ್ನಿನ ಮೆಟ್ಟಿಲು ಹತ್ತದ ಊರಿನ ಜನ ಇದು ಯಾಕೋ ವಿಪರೀತಕ್ಕೆ ಹೋಗುತ್ತಿದೆ ಎಂದೆನಿಸಿ 'ಪೊಲೀಸು ಗೀಲೀಸು ಎಲ್ಲಾ ಬ್ಯಾಡಾ ಪಂಚಾಯ್ತಿ ಸೇರ್ಸಿ ಇತ್ಯರ್ಥ ಮಾಡನಾ...' ಎಂದು ಮಾತನಾಡಿಕೊಂಡು ಒಂದು ಬೆಳಿಗ್ಗೆ ಪಂಚಾಯ್ತಿ ಕರೆದರು.
ಪಂಚಾಯ್ತಿಗೆ ಕುಳಿತಿದ್ದವರು 'ಸ್ರೀನಾಸಣ್ಣ ಅದ್ಯಾಕ್ಹಂಗೆ ಕಂಡಾಪಟ್ಟೆ ಹೊಡುದ್ರೀ... ಯಂತ ವಿಚಾರಾ...? ' ಎಂದು ಶ್ರೀನಿವಾಸಣ್ಣನ ವಿಚಾರಣೆ ಪ್ರಾರಂಭಿಸಿದರು. ಶ್ರೀನಿವಾಸಣ್ಣ ಹಲ್ಲು ಕಡಿಯುತ್ತಾ " ಈ ಹೆದ್ಲಿಮಗ್ನಿಗೆ ಎಷ್ಟು ಛರ್ಬಿ ಇರ್ಬಕು, ಏನಾ ಸುಮಾರ್ ವರ್ಸಾಗಿತ್ತು ನೋಡಿ ಬೊಂಬಾಯಿಂದ ಬಂದಾನೆ ಅಂತಾ ಕರ್ದು ಮಾತಾಡ್ಸಿದ್ರೆ ನನ್ನೇ ನಾಯಿ ಅಂತಾ ಬೈದ ಬೋಳಿಮಗ, ದಾರಿಲಿ ಹೋಗಬರರಿಗೆಲ್ಲಾ ಹಿಂಗೇ ಸದ್ರ ಕೊಟ್ರೆ ನಾಳೆ ಮಕ್ಳು ಮರಿ ಯಲ್ಲಾ ಕರ್ದು ಬೈತವೆ ಸಿಟ್ಟು ತಡಿಯಕಾಗ್ಲ ಅದ್ಕೆ ಬೇಲಿ ಗೂಟ ಮುರ್ಕಂಡು ಸಮಾ ನಾಕು ಇಟ್ಟೆ' ಎಂದು ತಾವು ಹೊಡೆದುದಕ್ಕೆ ಕಾರಣ ವಿವರಿಸಿದರು.
ಹಿರೀಕರಾದ ಸ್ರೀನಾಸಣ್ಣನಿಗೆ ಸತೀಶ ನಾಯಿ ಎಂದು ಬೈದಿದ್ದು ಪಂಚಾಯಿತಿದಾರರಿಗೂ ಕೋಪ ತರಿಸಿತು. ಪಂಚಾಯ್ತಿದಾರರು ಸತೀಶನ ಕಡೆಗೆ ತಿರುಗಿ ' ಏನಾ...? ಯಾಕಾ ಹಂಗ್ ಬೈದೆ ? ಬೊಂಬಾಯಿಗ್ ಹೋಗ್ ಬಂದೀನಂತ ಗಾಂಚಲಿಯೇನಾ ಬೆನ್ ಕಡಿತದೇನಾ ಎಂದು ಸತೀಶನನ್ನು ಜಾಡಿಸತೊಡಗಿದರು. ಮೊದಲೇ ಬೆನ್ನು ಕಡಿತಕ್ಕೆ ಪ್ರಸಾದ ಸ್ವೀಕರಿಸಿದ್ದ ಸತೀಶನಿಗೆ ಮತ್ತೆ ಬೆನ್ನಿನ ಸುದ್ದಿ ಕೇಳಿ ದಿಗಿಲಾಯಿತು. ಇದ್ಯಾಕೆ ಎಲ್ಲರೂ ಸೇರಿ ತನ್ನನ್ನು ಈಪಾಟಿ ಬ್ಯರಸಾಡುತ್ತಿದ್ದಾರೆ ಎಂಬುದು ಅರ್ಥವಾಗದೇ ತಾನು ಮಾಡಿದ ತಪ್ಪಾದರೂ ಏನು ಎಂದು ತಿಳಿಯದೇ ಗೊಂದಲವಾಯಿತು. " ನಾನು ಎಂತ ಬೈದದ್ದು ಮಾರ್ರೆ ಇವರಿಗೆ ದಾರಿಯಲ್ಲಿ ಸಿಕ್ಕಿದವರಿಗೆ ಹೇಗಿದ್ದೀರೀ ಸೀನಾಸಣ್ಣ ಎಂದು ಕೇಳಿದೆ. ಅವರು, ಪರವಾಗಿಲ್ಲ ಮಾರಾಯಾ ಅಂದರು, ನಾನು 'ಅಚ್ಚಾ...' ಎಂದಿದ್ದೇ ತಡ ಸೌದೆ ತೆಕೊಂಡು ಹೊಡೀಲಿಕ್ಕೆ ಶುರುಮಾಡಿದರು, ಎಂತ ಮಾರ್ರೆ ನಾನು ಊರಿಗೆ ಬಂದದ್ದೇ ತಪ್ಪಾ... ನಾಳೆನೆ ವಾಪಸ್ ಹೋಗ್ತೇನೆ." ಬೊಂಬಾಯಿಯಲ್ಲಿ ಘಟ್ಟದವರ ಸಹವಾಸದಿಂದ ತನ್ನ ಬದಲಾದ ಕನ್ನಡ ಉಚ್ಛಾರಣೆಯಲ್ಲಿ ಮಧ್ಯೆ ಮಧ್ಯೆ ಹಿಂದಿಯನ್ನು ಬೆರೆಸಿ ಊರಿನವರಿಗೆ ಅರ್ಧಂಬರ್ಧ ಅರ್ಥವಾಗುವಂತೆ ಮಾತನಾಡಿದ.
ಸತೀಶ ಮಾತು ಮಾತಿಗೂ ಅಚ್ಚಾ ಅಚ್ಚಾ ಎಂದು ಸೇರಿಸುತ್ತಿದ್ದರಿಂದ ಸ್ರೀನಾಸಣ್ಣನ ಕೋಪಕ್ಕೆ ಕಾರಣವಾಗಿದ್ದೇನೆಂದು ಪಂಚಾಯ್ತಿಗೆ ಕುಳಿತಿದ್ದವರಿಗೆ ಅರ್ಥವಾಗಿ ಹೋಯ್ತು. ಕಾರಣ ಅವನು ಊರಿಗೆ ಬಂದಾಗಿನಿಂದ ಅವರಲ್ಲಿ ಹಲವರಿಗೂ ಕೂಡಾ ಮಾತನಾಡುವಾಗ ಅದೇ ಪದ ಪ್ರಯೋಗಿಸಿದ್ದ.! ಹೋಗ್ಲಿ ಬಿಡಿ ಏನಾ ತಪ್ಪಾಗ್ಯದೆ ಇದ್ನ ಇಲ್ಲಿಗೇ ಮುಗ್ಸಾನಾ ಎಂದು ಇಬ್ಬರಿಗೂ ಸಮಾಧಾನ ಮಾಡಿ ಪಂಚಾಯ್ತಿ ಮುಗಿಸಿದರು.
ವೆಂಕಪ್ಪ ಶೆಟ್ಟರ ಮಗ ಸತೀಶ ಊರಿನಲ್ಲಿ ಯಾರದೋ ತೋಟದಲ್ಲಿ ಬಾಳೆಗೊನೆ ಕದ್ದು ಸಿಕ್ಕಿಬಿದ್ದು ರಾತ್ರೋ ರಾತ್ರಿ ಊರು ಬಿಟ್ಟು ಪರಾರಿಯಾಗಿದ್ದ. ಓಡಿ ಹೋದವನು ಬೊಂಬಾಯಿಯಲ್ಲಿದ್ದ ಯಾರೋ ಗೆಳೆಯನ ಸಹಾಯದಿಂದ ಬೊಂಬಾಯಿಗೆ ಹೋಗಿ ಹೋಟೆಲ್ ಕೆಲಸಕ್ಕೆಸೇರಿಕೊಂಡ ಎಂಬ ಮಾಹಿತಿ ತಿಂಗಳ ನಂತರ ಮನೆಯವರಿಗೆ ಸಿಕ್ಕಿತು. ಊರಿಗೆ ಬಂದರೆ ಬಾಳೆಗೊನೆ ಬಾಬ್ತಿಗೆ ಎಲ್ಲಿ ಚಕ್ಕಳ ಜಾರಿಸುತ್ತಾರೊ ಎಂದು ಹೆದರಿ ಎರಡು ವರ್ಷ ಊರಿನತ್ತ ತಲೆ ಹಾಕಿರಲಿಲ್ಲ. ಎರಡು ವರ್ಷಗಳ ನಂತರ ಊರಿಗೆ ಬಂದಿದ್ದ. ಮೊದಮೊದಲು ಊರಿನಲ್ಲಿ ಯಾರಿಗೂ ಸುಲಭಕ್ಕೆ ಅವನ ಗುರುತೇ ಹತ್ತಲಿಲ್ಲ. ಉದ್ದ ಕೂದಲು ಬಿಟ್ಟುಕೊಂಡು, ಅಲ್ಲಲ್ಲಿ ಹರಿದ ಪ್ಯಾಂಟು, ಬಣ್ಣ ಬಣ್ಣದ ಶರಟು ತೊಟ್ಟುಕೊಂಡು ಜಾತ್ರೆಯಲ್ಲಿ ದೊಂಬರಾಟ ಆಡುವವನಂತೆ ಕಾಣುತ್ತಿದ್ದ. ಹಳೆಯದನ್ನೆಲ್ಲಾ ಮರೆಯಲಿ ಅಂತಲೋ ಇಲ್ಲಾ ತಾನೀಗ ದೊಡ್ಡ ಜನ ಆಗಿದ್ದೇನೆಂದು ತೋರಿಸಿಕೊಳ್ಳಲೋ ಸಿಕ್ಕ ಸಿಕ್ಕವರಿಗೆಲ್ಲಾ ಪುಗಸಟ್ಟೆ ಎಣ್ಣೆ ಕುಡಿಸುತ್ತಿದ್ದ. ಎಣ್ಣೆಯ ಹಂಗಿಗೋ ಅಥವಾ ಬದಲಾದ ಆತನ ವೇಷಭೂಷಣದಿಂದಲೋ ಊರಿನ ಬಹುತೇಕ ಜನ ಅವನ ಹಳೆಯ ಕಳ್ಳತನದ ವಿಚಾರವನ್ನು ಮರೆತೇಬಿಟ್ಟರು.
ತಾನು ಹಿಂದಿ ಕಲಿತಿದ್ದೇನೆಂದು ತೋರಿಸಿಕೊಳ್ಳಲೋ ಇಲ್ಲವೇ ಇಷ್ಟು ಸಮಯ ಊರು ಬಿಟ್ಟಿದ್ದರಿಂದಾಗಿ ಕನ್ನಡ ಮರೆತುಹೋಗಿದೆ ಎಂದು ತೋರಿಸಿಕೊಳ್ಳಲೋ ಊರಿನವರೊಂದಿಗೆ ಮಾತನಾಡುವಾಗ ಮಾತು ಮಾತಿಗೂ " ಅಚ್ಚಾ.. ಅಚ್ಚಾ..." ಎಂದು ಸೇರಿಸುತ್ತಿದ್ದ. ಮೊದಮೊದಲು ಊರಿನವರಿಗೂ ಇದು ಹಚ್ಚಾ ಅಂದಂತೆ ಕೇಳಿತಾದರೂ ಮತ್ತೆ ಮತ್ತೆ ಕೇಳಿದ ನಂತರ ಇದು ನಾಯಿ ಓಡಿಸುತ್ತಿರುವುದಲ್ಲ, ಇದ್ಯಾವುದೊ ಬೇರೆ ಭಾಷೆ ಎಂದು ಅರ್ಥವಾಯಿತು.
ಆದರೆ ಅದು ಹಿಂದಿ ತಿಳಿಯದ ಶ್ರೀನಿವಾಸಣ್ಣನಿಗೆ ಗಡಿಬಿಡಿಯಲ್ಲಿ "ಹಚ್ಚಾ.. ಹಚ್ಚಾ..." ಎಂಬುದು ತನ್ನನ್ನೇ ಬೈಯ್ಯುತ್ತಿರುವಂತನಿಸಿ ಈ ಹೆದ್ಲಿಮಗ ನನ್ನೇ ಹಚ್ಚಾ ಅಂತಾನಲಾ ನಾನೇನು ಇವ್ನಪ್ಪ ಸಾಕಿರಾ ನಾಯಿನಾ...? ಎಂದು ಪಿತ್ತ ನೆತ್ತಿಗೇರಿ ಬೇಲಿಗೂಟ ಮುರಿದುಕೊಂಡು ಸತೀಶನನ್ನು ಹಣ್ಣಾಗುವಂತೆ ಸಮಾ ಸದ್ದು ಹಾಕಿದ್ದರು...
Comments
Post a Comment