ದೊಡ್ಡ ಮರವೊಂದರ ಒಣಗಿದ ಕೊಂಬೆಯ ತುದಿಯಲ್ಲಿ ಕುಳಿತು ಕೆಳಗಿನ ಹಳ್ಳದಲ್ಲಿ ಒಂದು ಮೀನಾದ್ರೂ ಮೇಲೆ ಬರುತ್ತೇನೋ ಎಂದು ಕಾಯುತ್ತಾ ಕುಳಿತಿರುತ್ತಿದ್ದ ಬೆಳ್ಳಕ್ಕಿಯೊಂದು ಕೆಳಗೆ ರಾಜಾರೋಷದಿಂದ ಓಡಾಡುತ್ತಾ ಶಿಕಾರಿ ಮಾಡುತ್ತಿದ್ದ ಹುಲಿಯನ್ನು ದಿನವೂ ನೋಡುತ್ತಾ ಹುಟ್ಟಿದ್ರೆ ಹುಲಿಯಾಗಿ ಹುಟ್ಬೇಕ್ ಗುರೂ ಎಂಥಾ ಸೌಭಾಗ್ಯನಪ್ಪಾ ಈ ಹುಲೀದೂ ಇಡೀ ಕಾಡೇ ಹೆದ್ರಿ ನಡುಗುತ್ತೆ ನಾನು ಒಂದು ಮೀನು ಹಿಡಿಯೋಕೆ ಈ ಒಣಗಿದ ಕೊಂಬೆಯ ತುದೀಲಿ ಬಿಸಿಲಲ್ಲಿ ಕಾಯ್ತಾ ಕೂರ್ಬೇಕು ಯಾರಿಗ್ ಬೇಕು ಈ ಕರ್ಮ ಮುಂದಿನ್ ಜನ್ಮದಲ್ಲಾದ್ರೂ ನನ್ನನ್ನ ಹುಲಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ದಿನವೂ ಬೇಡಿಕೊಳ್ಳುತ್ತಿತ್ತು.
ಇತ್ತ ಹುಲಿ ಬಿರು ಬಿಸಿಲಿನಲ್ಲಿ ಕಾಡೆಲ್ಲಾ ಅಲೆದಾಡಿ ಸುಸ್ತಾಗಿ ಬಂದು ಮರದಡಿ ಮಲಗಿಕೊಂಡು ಮರದ ತುತ್ತ ತುದಿಯಲ್ಲಿ ಕುಳಿತು ಇಡೀ ಕಾಡನ್ನು ನೋಡುವ ಬೆಳ್ಳಕ್ಕಿಯನ್ನೇ ದಿನವೂ ದಿಟ್ಟಿಸುತ್ತಾ ' ಥೂ ಏನ್ ಹಾಳ್ ಜನ್ಮ ಗುರೂ ದಿನ ಬೆಳಗೆದ್ರೆ ಹೊಟ್ಟೆ ತುಂಬಿಸ್ಕಳಕೆ ಎಷ್ಟೆಲ್ಲಾ ಒದ್ದಾಡ್ಬೇಕು ಅದೇ ಈ ಬೆಳ್ಳಕ್ಕಿ ಯಾರ ಕೈಗೂ ಸಿಗದಂಗೆ ಅಷ್ಟೆತ್ತರದಲ್ಲಿ ಕೂತ್ಕಂಡು ಎಷ್ಟು ಸುಲಭವಾಗಿ ಮೀನು ಹಿಡಿಯುತ್ತಪ್ಪಾ... ಮುಂದಿನ್ ಜನ್ಮ ಅಂತಿದ್ದರೆ ಬೆಳ್ಳಕ್ಕಿಯಾಗಿ ಹುಟ್ಸಪ್ಪಾ ದೇವ್ರೇ... ಎಂದು ಕೇಳಿಕೊಳ್ಳುತ್ತಿತ್ತು.!
ಮನುಷ್ಯನ ಆಲೋಚನೆಗೆ ಸಣ್ಣದೊಂದು ಉದಾಹರಣೆಯಷ್ಟೇ ಇದು. ನಾವು ನಮಗಿರುವ ಕಷ್ಟಗಳನ್ನು ನೆನೆದು ಅದರಿಂದ ಹೊರಬರಲಾಗದೇ ದಿನವೂ ಒಳಗೇ ಕೊರಗುತ್ತಿರುತ್ತೇವೆ. ಇನ್ಯಾರನ್ನೋ ನೋಡಿ ' ಥತ್ ನಂದೊಂದ್ ಹಾಳು ಬದ್ಕು ಅವ್ನುನ್ ನೋಡು ಹೆಂಗಿದಾನೆ ಈ ದೇವ್ರು ನಂಗೇ ಯಾಕ್ಹಿಂಗ್ ಮಾಡ್ತಾನೆ...?' ಎಂದು ನಮ್ಮನ್ನು ಶಪಿಸಿಕೊಂಡು, ದೇವರಿಗೂ ಶಾಪ ಹಾಕುತ್ತಿರುತ್ತೇವೆ. ಅದೇ ಸಮಯದಲ್ಲಿ ನಾವು ಯಾರನ್ನು ನಮ್ಮ ಬದುಕಿನ ಜೊತೆಗೆ ಹೋಲಿಸಿ ನೋಡುತ್ತಿರುತ್ತೇವೋ 'ಅವನು' ಮತ್ಯಾರನ್ನೋ ನೋಡುತ್ತಾ ತನ್ನ ಜಂಜಾಟಗಳಿಗೆ ಶಾಪ ಹಾಕುತ್ತಿರುತ್ತಾನೆ.! ಇದೇ ಬದುಕು...!
ಈ ಬದುಕು ಬಹುತೇಕರಿಗೆ ಸುಲಭವಿರುವುದಿಲ್ಲ. ಪ್ರತಿಯೊಬ್ಬರ ಬದುಕಿನೊಳಗೂ ಒಂದಷ್ಟು ಕೊರಗುಗಳು, ಕೊರತೆಗಳು ಕೊರೆಯುತ್ತಿರುತ್ತವೆ. ಕೆಲವರಿಗೆ ಸಣ್ಣವು, ಕೆಲವರಿಗೆ ದೊಡ್ಡವು. ಅಷ್ಟೇ...
ಸುಮ್ಮನೆ ಏನಾದರೊಂದು ನೋವಿನ ಕುರಿತಾದ ವಿಚಾರವನ್ನು ಬರೆದುನೋಡಿ ಹಲವರು ತಕ್ಷಣ ಸ್ಪಂದಿಸುತ್ತಾರೆ. ನಮ್ಮ ನೋವು ಮತ್ಯಾರನ್ನಾದರೂ ತಟ್ಟುತ್ತದೆ ಅಥವಾ ಕನೆಕ್ಟ್ ಆಗುತ್ತದೆ ಅಂದರೆ ನಮಗಿದ್ದಂತದ್ದೇ ಯಾವುದೋ ನೋವು ಅವರನ್ನೂ ಕಾಡುತ್ತಿದೆ ಎಂದೇ ಅರ್ಥ.
ನಿಮ್ಗೇನ್ ಬಿಡಿ ಸಾsssರ್... ಎಂದು ಯಾರಾದರೂ ಅಂದಾಗೆಲ್ಲಾ ಮೇಲಿನ ಹುಲಿ ಬೆಳ್ಳಕ್ಕಿಯ ಕಥೆ ನೆನಪಾಗುತ್ತದೆ.
Comments
Post a Comment