ಎರಡು ವರ್ಷಗಳ ಹಿಂದೆ ನಾವು ವಿರಾಜಪೇಟೆಯಿಂದ ಇರಿಟ್ಟಿ ಎನ್ನುವ ಕೇರಳದ ಗಡಿಭಾಗದ ಊರಿಗೆ ಹೋಗಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಎಲ್ಲಿ ನೋಡಿದರಲ್ಲಿ ಗುಡ್ಡ , ಕಾಡು ಕಡಿದು ಕಟ್ಟಡಗಳ ನಿರ್ಮಾಣ, ಗೆರೆ ಅಗೆದು ರಸ್ತೆ ಅಗಲೀಕರಣ, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಕಣಿವೆಗೆ ರಸ್ತೆ ವಿಸ್ತರಣೆಯ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಕಣಿವೆಯಾಚೆಗಿನ ಗುಡ್ಡವನ್ನು ಇನ್ಯಾವುದೋ ಕಾಮಗಾರಿಗಾಗಿ ಜೆಸಿಬಿಗಳು ಬಗೆಯುತ್ತಿದ್ದವು. ಇನ್ನೊಂದು ಬದಿಯಲ್ಲಿ ರಬ್ಬರ್ ತೋಟಗಳು. ನದಿಯ ಕಣಿವೆಯ ಅಂಚಿಗೇ ಮನೆಗಳು, ಅಂಗಡಿ-ಹೋಟೆಲುಗಳು. ಒಟ್ಟಾರೆಯಾಗಿ ಆ ಇಡೀ ಪರಿಸರ ಒಂದು ರೀತಿಯ ಕೃತಕ ನಿರ್ಮಾಣದ ಧಾವಂತಕ್ಕೆ ಬಿದ್ದಂತೆ ತೋರುತ್ತಿತ್ತು. ಕೇರಳದ ಆ ಊರು ಮನುಷ್ಯನ ಕೈಚಳಕಕ್ಕೆ ಸಿಕ್ಕಿ ಚಿತ್ರವಿಚಿತ್ರ ರೂಪ ಪಡೆಯುತ್ತಿರುವ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಗೋಚರವಾಗುತ್ತಿತ್ತು. ಇವತ್ತು ಮಾನವ ಕೇಂದ್ರಿತ ವ್ಯವಸ್ಥೆಯು ಪ್ರಕೃತಿಯ ಮೇಲೆ ಹೊಸ ಹೊಸಾ ಆವಿಷ್ಕಾರಗಳ ಪ್ರಯೋಗಗಳನ್ನು ಎಗ್ಗಿಲ್ಲದೇ ನಡೆಸುತ್ತಿದೆ. ಇದೊಂತರಾ ತಾಯಿಯ ಎದೆಯೊಳಗೆ ಕೃತಕ ಹಾಲನ್ನು ಸಿರಿಂಜಿನ ಮೂಲಕ ಒಳಸೇರಿಸಲು ಪ್ರಯತ್ನಿಸಿದಂತೆ.! ಇದಕ್ಕೆ ಆಧುನಿಕ ವಿಜ್ಞಾನ ಎಂದು ಹೆಸರು.! ಇದರ ಹೆಸರಿನಲ್ಲಿಯೇ ಭೂ ರಚನೆಯ ವಿರುದ್ಧವಾಗಿ ರಸ್ತೆ, ಕೆನಲ್ , ಸುರಂಗ ಮಾರ್ಗ, ಅತಿ ಭಾರದ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಅವೈಜ್...