ಬೆಳಿಗ್ಗೆಯೇ ಚಿಕ್ಕಮಗಳೂರಿನಲ್ಲಿ ಸಣ್ಣಗೆ ಮಳೆ. ನಾವು ಮಲೆನಾಡಿಗರಿಗೆ ಮಳೆ ಬಂತೆಂದರೆ ಮನದ ಮೂಲೆಯಲ್ಲೆಲ್ಲೋ ಅಡಗಿ ಕುಳಿತ ನವಿರು ನೆನಪುಗಳಿಗೆ ಚಿಗುರು ಬಂದುಬಿಡುತ್ತದೆ. ಅದರಲ್ಲೂ ಊರು ಬಿಟ್ಟು ಹೊರಗೆಲ್ಲೋ ನೆಲೆಸಿದವರಿಗಂತೂ ಸಣ್ಣಗೆ ಸೆಳೆತ ಪ್ರಾರಂಭ. ಅಂದಹಾಗೆ ಮೇ ಮಧ್ಯಭಾಗಕ್ಕೇ ಮಳೆ ಶುರುವಾಗುವ ಪರಿಪಾಠ ನಿಂತು ಹೋಗಿ ಹತ್ತಿರತ್ತಿರ ದಶಕವೇ ಕಳೆದು ಹೋಯ್ತೇನೋ...? ಈಗೇನಿದ್ದರೂ ಜುಲೈ ಹತ್ತರ ನಂತರವೇ ಪೂರ್ಣಪ್ರಮಾಣದ ಮಳೆಗಾಲದ ಶುರುವಾತು ಅನಿಸಿಬಿಟ್ಟಿದೆ. ತೊಂಬತ್ತರ ದಶಕದಲ್ಲಿ ಬಿರು ಬೇಸಿಗೆ ದಿನಗಳು ಮುಗಿದು ಮೇ ಹದಿನೈದು ದಾಟಿದ ತಕ್ಷಣ ಇದ್ದಕ್ಕಿದ್ದಂತೆ ಪ್ರಕೃತಿಯಲ್ಲಿ ದೊಡ್ಡದೊಂದು ಬದಲಾವಣೆ ಕಾಣಿಸಿಕೊಳ್ಳುತ್ತಿತ್ತು. ಕಾರ್ಮೋಡಗಳು ಗಡಿಬಿಡಿಯಿಂದ ಅತ್ತಿಂದಿತ್ತ ಚಲಿಸುತ್ತಾ ಕಣ್ಣು ಕುಕ್ಕುತ್ತಿದ್ದ ಬಿರು ಬಿಸಿಲನ್ನು ಹಠಾತ್ತನೆ ತನ್ನೊಳಗೆ ಅಂತರ್ಗತಗೊಳಿಸಿಕೊಂಡು ಗವ್ವನೆ ಕತ್ತಲು ಕವಿದಂತಾಗಿ ಪಟಾರನೆ ಸಿಡಿಲು ಬಡಿದು ಸಣ್ಣಗೆ ಮಳೆ ಉದುರಾಡತೊಡಗಿತೆಂದರೆ ಬೇಸಿಗೆಯ ಬೇಗೆಗೆ ಬಸವಳಿದು ಬೆವರು ಬಸಿಯುತ್ತಾ ಹೆಬ್ಬಾವಿನಂತೆ ಬಿದ್ದುಕೊಂಡಿರುತ್ತಿದ್ದ ಮಲೆನಾಡು ಧಿಗ್ಗನೆದ್ದುಕುಳಿತು ಧಾವಂತಕ್ಕೆ ಬೀಳುತ್ತಿತ್ತು. ಮಲೆನಾಡಿಗರಂತೆಯೇ ಅಂಗಳದ ಮೂಲೆಯಲ್ಲಿ ಸೋಮಾರಿಯಂತೆ ಬಿದ್ದಿರುತ್ತಿದ್ದ ಸೌದೆಯನ್ನು ಲಗುಬಗೆಯಿಂದ ಕೊಟ್ಟಿಗೆಗೆ ಒಟ್ಟುವ ಗಡಿಬಿಡಿ. ಮನೆಗೊಂದರಂತೆ ವಾಹನಗಳಿರದಿದ್ದ ಅವತ್ತಿನ ಕಾಲಕ್ಕೆ ಮಳೆಗಾಲ...