ಸಣ್ಣದೊಂದು ಟೆಸ್ಟ್! ನಿಮಗೆ ಇತ್ತೀಚೆಗೆ ಎಷ್ಟು ಜನರ ಮೊಬೈಲ್ ನಂಬರ್ ಗಳು ನೆನಪಿವೆ ? ಬೆಂಗಳೂರಿನಂತಹ ನಗರದ ಒಂದು ಸಲ ಹೋಗಿದ್ದ ಯಾವುದೋ ಬಡಾವಣೆಯ ಯಾವುದೊ ರಸ್ತೆಯ ವಿಳಾಸ ಹಲವು ತಿಂಗಳ ನಂತರ ಮತ್ತೆ ಹೋಗಲೆಂದು ನೆನಪಿಸಿಕೊಂಡರೆ ನೆನಪಾಗುತ್ತದಾ ? ಫೇಸ್ಬುಕ್ಕಿನಲ್ಲೊ ಮತ್ತೆಲ್ಲೋ ಒಂದು ಸಲ ಭೇಟಿಯಾದ, ಮೆಸೇಜ್ ಮಾಡಿಕೊಂಡ, ಕರೆವಮಾಡಿದ ವ್ಯಕ್ತಿ ಮತ್ತಿನ್ನ್ಯಾವಾಗಲೋ ಸಿಕ್ಕಿದರೆ ಥಟ್ಟನೆ ಗುರುತು ಹತ್ತುತ್ತದಾ ? ಹೌದು ಇವೆಲ್ಲಾ ಮೊದಲಿನಂತೆಯೇ ನನಗೆ ಸಲೀಸಾಗಿ ಒದಗುತ್ತಿದೆ ಎಂದರೆ ಅವನು ಯಾವ ತಂತ್ರಜ್ಞಾನಕ್ಕೂ ಗುಲಾಮನಾಗಿಲ್ಲ ಎಂದರ್ಥ. ಹಾಗೂ ಅವನು ಈ ಜಗತ್ತಿನ ಆರೋಗ್ಯವಂತ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊಬೈಲ್, ಸ್ಮಾರ್ಟ್ ಫೋನ್ ಇರದೇ ಇದ್ದ ಕಾಲದಲ್ಲಿ ನಮ್ಮ ತಲೆಯೊಳಗೆ ಅದೆಷ್ಟೊಂದು ದೂರವಾಣಿ ಸಂಖ್ಯೆಗಳು ಹುದುಗಿ ಕುಳಿತಿದ್ದವು.! ಎಸ್ಟಿಡಿ ಬೂತ್ ಅಥವಾ ಮನೆಯ ಸ್ಥಿರ ದೂರವಾಣಿಯೆದುರು ಕುಳಿತರೆ ಹತ್ತಾರು ಜನರಿಗೆ ಯಾವುದೇ ಡೈರಿ ತಡಕಾಡದೇ ನಂಬರುಗಳನ್ನು ನೆನಪಿಸಿಕೊಂಡು ಕರೆ ಮಾಡುತ್ತಿದ್ದೆವು. ಆದರೆ ಇವತ್ತು ಅತ್ಯಂತ ಅಗತ್ಯ ಸಂಖ್ಯೆಗಳೂ ನೆನಪಾಗುವುದಿಲ್ಲ. ಪ್ರತಿಯೊಂದಕ್ಕೂ ಫೋನ್ ತಡಕಾಡುತ್ತೇವೆ. ಇದು ನಮಗಂಟಿರುವ ದೊಡ್ಡ ಸಮಸ್ಯೆಯೆಂದು ನಮಗರಿವಾಗುವುದು ಒಂದೋ ಫೋನ್ ಬ್ಯಾಟರಿ ಸತ್ತುಹೋದಾಗ ಇಲ್ಲವೇ ಫೋನ್ ಕಳೆದುಹೋದಾಗ.! ಇನ್ನು ಮೊದಲಿನಂತೆ ಒಂದು ಬಾರಿ ಹೋಗಿದ್ದ ವಿಳಾಸಕ್ಕೆ ಮತ್ತೆ ಹಲವು ತಿಂಗಳ ...